ಬೆಳಗಾವಿ : ಬೆಳಗಾವಿಯಲ್ಲಿ ಕ್ರೈಸ್ತ ಬಾಂಧವರು ಯೇಸು ಕ್ರಿಸ್ತನು ಪುನಃ ಜೀವಿತನಾಗಿ ಎದ್ದು ಬಂದ ಪುನರುತ್ಥಾನ ಹಬ್ಬ ಈಸ್ಟರ್ ನ್ನು ಭಾನುವಾರ ಆಚರಿಸಿದರು.
ಶುಕ್ರವಾರ ಯೇಸುವಿನ ಮರಣದ ದಿನವನ್ನು (ಶುಭ ಶುಕ್ರವಾರ – ಗುಡ್ ಫ್ರೈಡೆ) ಆಚರಿಸಿದ್ದ ಕ್ರೈಸ್ತರು ಶನಿವಾರ ರಾತ್ರಿಯಿಂದಲೇ ಯೇಸುವಿನ ಪುನರುತ್ಥಾನ (ಪುನ: ಜೀವಿತನಾಗಿ ಎದ್ದು ಬಂದದು) ದ ವಿಶೇಷ ಪ್ರಾರ್ಥನೆ, ಆರಾಧನೆಯಲ್ಲಿ ತೊಡಗಿದ್ದರು. ಭಾನುವಾರ ಇಡೀ ದಿನ ಚರ್ಚಗಳಲ್ಲಿ ಸಡಗರ ಸಂಭ್ರಮದಿಂದ ಪ್ರಾರ್ಥನೆ, ಸ್ತುತಿ ಆರಾಧನೆಗಳು ಜರುಗಿದವು.
ಎಲ್ಲ ಚರ್ಚಗಳಲ್ಲಿ ಫಾದರ್, ಪಾಸ್ಟರ್ ಮತ್ತು ಸಭಾಪಾಲಕರು ಯೇಸುವಿನ ಜೀವನ, ಮರಣ ಮತ್ತು ಪುನಾರುತ್ಥಾನದ ಕುರಿತು ಬೋಧನೆ ಮಾಡಿ, ಯಾಕೆ ಯೇಸುವನ್ನು ಶಿಲುಬೆಗೆ ಏರಿಸಿ ಕೊಲ್ಲಲ್ಪಡಲಾಯಿತು ಎಂದು ವಿವರಿಸಿದರು.
ಸರ್ವಶಕ್ತ, ಸೃಷ್ಠಿಕರ್ತ ದೇವರು ಪಾಪರಹಿತ ಲೋಕ ಉದ್ದೇಶಿಸಿದ್ದ. ಆದರೆ ಅದಕ್ಕೆ ವ್ಯತ್ತಿರಿಕ್ತವಾಗಿ ಮಾನವ ಪಾಪ ಮಾಡಿ ದೇವರಿಂದ ದೂರವಾಗಿ ನರಕದ ಶಿಕ್ಷೆಗೆ ಗುರಿಯಾಗಿದ್ದ. ಮನುಷ್ಯರನ್ನು ತನ್ನದೇ ಸ್ವರೂಪದಲ್ಲಿ ಸೃಷ್ಠಿಸಿದ ಸರ್ವಶಕ್ತ, ಸೃಷ್ಠಿಕರ್ತ ದೇವರು ತಾನೇ ಉಂಟು ಮಾಡಿದ ನಿರ್ಮಾಣವನ್ನು ಎಂದಿಗೂ ಆರದ ಬೆಂಕಿಯಲ್ಲಿ ಹಾಕಿ ನಾಶ ಮಾಡಲು ಬಯಸದೇ ಆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಪಾಪವನ್ನೇ ಮಾಡದ ವ್ಯಕ್ತಿಯೊಬ್ಬನ ಬಲಿ ಕೊಟ್ಟು ಮನುಷ್ಯ ಕುಲವನ್ನು ಬಿಡಿಸಿಕೊಳ್ಳಲು ಉದ್ದೇಶಿಸಿದ್ದ. ಆದರೆ ಪಾಪ ಮಾಡದ ವ್ಯಕ್ತಿ ಸಿಕ್ಕದರಿಂದ ದೇವರು ತಾನೇ ಯೇಸು ಕ್ರಿಸ್ತನ ರೂಪದಲ್ಲಿ ನರಾವತಾರವೆತ್ತಿ ಈ ಲೋಕಕ್ಕೆ ಬಂದನು.
ಜನರಿಗೆ ಪ್ರೀತಿ ಬೋಧಿಸಿದ್ದ ಯೇಸು ಪಾಪವನ್ನು ಖಂಡಿಸಿದ್ದ, ಧಾರ್ಮಿಕ ಮುಖಂಡರು ಹೇಗೆ ಕಪಟವಾಗಿ ವರ್ತಿಸುತ್ತಾರೆ, ದೇವರ ಆಜ್ಞೆಯನ್ನು ಪಾಲಿಸದ ಅವರು ಜನರ ಮೇಲೆ ಪಾಲನೆ ಮಾಡಲೇಬೇಕೆಂಬ ಅಸಾಧ್ಯ ಆಜ್ಞೆಗಳನ್ನು ಹೇರುತ್ತಿದ್ದರು. ಇದರಿಂದ ಯೇಸುವನ್ನು ದ್ವೇಷಿಸಿ, ಸುಳ್ಳು ಆರೋಪಗಳನ್ನು ಹೊರಿಸಿ ಆತನನ್ನು ಶಿಲುಬೆಗೇರಿಸಿ ಕೊಲ್ಲಿಸಲಾಯಿತು.
ತನ್ನನ್ನು ಶಿಲುಬೆಗೆ ಹಾಕಿ ಸಾಯಿಸುವ ಮತ್ತು ತಾನು ಸತ್ತ ಮೂರನೇ ದಿನದಲ್ಲಿ ಪುನ ಜೀವಿತನಾಗಿ ಬರುವ ಕುರಿತು ಯೇಸು ಅನೇಕ ಬಾರಿ ಮೊದಲೇ ತಿಳಿಸಿದ್ದ ಅದರಂತೆ ಸತ್ತು ಮತ್ತೇ ಜೀವಿತನಾಗಿ ಎದ್ದು ಬಂದ ಹಿನ್ನಲೆಯಲ್ಲಿ ಈಸ್ಟರ್ ಹಬ್ಬ ಪ್ರಪಂಚದಾದ್ಯಂತ ಭಾನುವಾರ ಆಚರಿಸಲಾಯಿತು.
ತಂದೆಯಾದ ದೇವರ ಒಬ್ಬನೇ ಮಗನಾದ ಯೇಸು ಕ್ರಿಸ್ತನು ಮನುಷ್ಯರೊಂದಿಗೆ ಸದಾ ಕಾಲ ಜೀವಿಸುವುದಕ್ಕಾಗಿ ಪುನರುತ್ಥಾನ ಹೊಂದಿ ಬಂದ ದಿನವಾಗಿದೆ. ದೇವರಾದ ಯೇಸು ಕ್ರಿಸ್ತನನ್ನು ಶಿಲುಬೆಗೆ ಹಾಕಿದ ದಿನ ದೇಹವನ್ನು ಗುಹೆಯಲ್ಲಿ ನಿರ್ಮಿಸಿದ ಸಮಾಧಿಯಲ್ಲಿರಿಸಲಾಗಿತ್ತು,
ಆದರೆ ಇಂದು ಖಾಲಿ ಸಮಾಧಿಯನ್ನು ಕಾಣಬಹುದು ಕಾರಣ ಯೇಸು ಮರಣವನ್ನು ಜಯಿಸಿ ಎದ್ದುಬಂದ ಯೂದಾ ರಾಜಸಿಂಹ. ಮರಣವು ಯೇಸುಕ್ರಿಸ್ತನನ್ನು ಕೊಲ್ಲಲಿಲ್ಲ, ಬದಲಾಗಿ ಯೇಸುಕ್ರಿಸ್ತನು ಮರಣವನ್ನು ಕೊಂದನು. ಅಂದರೆ ಮೂರು ದಿನಗಳ ಕಾಲ ಸಮಾಧಿಯಲ್ಲಿದ್ದ ಯೇಸುಕ್ರಿಸ್ತನು ತನ್ನ ತಂದೆಯಾದ ದೇವರ ಪ್ರಭಾವದಿಂದ ಎದ್ದುಬಂದನು. ಏಕೆಂದರೆ ಯೇಸುಕ್ರಿಸ್ತನ ದೇಹವನ್ನು ತಂದೆಯಾದ ದೇವರು ಪರಲೋಕದಲ್ಲಿಯೇ ಉಂಟು ಮಾಡಿದ್ದನು ಹಾಗೂ ಲೋಕಪಾಪಗಳನ್ನು ಹೊತ್ತುಕೊಂಡು ಹೋಗುವ ದೇವರ ಕುರಿಮರಿಯನ್ನಾಗಿ ಭೂಮಿಗೆ ಕಳುಹಿಸಿದ್ದನು. ಯೇಸು ಕ್ರಿಸ್ತನು ತಂದೆ ವಹಿಸಿದ ಕಾರ್ಯವನ್ನು ಶಿಲುಬೆಯಲ್ಲಿ ಸಂಪೂರ್ಣ ಮಾಡಿದ ನಂತರ ಲೋಕಪಾಪವನ್ನು ತನ್ನೊಂದಿಗೆ ಸಮಾಧಿ ಮಾಡಿ ಪುನರುತ್ಥಾನ ಶಕ್ತಿಯೊಂದಿಗೆ ಎದ್ದು ಬಂದನು.