ಅಥಣಿ: ಕೊಟ್ಟಲಗಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯ ಟೆಂಡರ್ ಪ್ರಕ್ರಿಯೆ ಇನ್ನೂ ಮುಗಿದಿಲ್ಲ, ಆದರೆ ಮುಖ್ಯಮಂತ್ರಿಗಳು ಬರುವ ದಿ. 28 ರಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದು ಕಾನೂನು ಬಾಹಿರ ಎಂದು ನ್ಯಾಯವಾದಿ ಹಾಗೂ ಆಮ್ ಆದ್ಮಿ ಪಕ್ಷದ ಅಥಣಿ ಅಭ್ಯರ್ಥಿ ಸಂಪತಕುಮಾರ ಶೆಟ್ಟಿ ಆರೋಪಿಸಿದರು.
ಅವರು ಅಥಣಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕರ್ನಾಟಕ ರಾಜ್ಯ ನೀರಾವರಿ ನಿಗಮ ನಿಯಮಿತ ಕಚೇರಿಯಿಂದ ಪಡೆದುಕೊಂಡ ದಾಖಲಾತಿಗಳನ್ನು ಬಿಡುಗಡೆಗೊಳಿಸಿದರು.
744 ಕೋಟಿ ರೂ.ವೆಚ್ಚದ ಅಮಾಜೇಶ್ವರಿ ಕೊಟ್ಟಳಗಿ ಯಾತ ನೀರಾವರಿ ಯೋಜನೆಯ ಟೆಂಡರ್ ಪ್ರಕ್ರಿಯೆ ಪ್ರಾರಂಭದ ಹಂತದಲ್ಲಿದ್ದು, ಕಳೆದ ದಿನಾಂಕ 18ರಂದು ಟೆಂಡರ್ ಪ್ರಕ್ರಿಯೆಗೆ ಅಧಿಸೂಚನೆ ಹೊರಡಿಸಲಾಗಿದೆ. ಕಾಮಗಾರಿಯ ಗುತ್ತಿಗೆ ಹೊಂದಲು ಅರ್ಜಿ ಸಲ್ಲಿಸಲು ಇದೇ ದಿ. 27ರಂದು ಕೊನೆಯ ದಿನಾಂಕವಾಗಿದೆ. ದಿ. 28ರಂದು ಸಾಯಂಕಾಲ 4:00 ವರೆಗೆ ತಾಂತ್ರಿಕ ಬಿಡ್ ತೆರೆದು ನೋಡಲಾಗುತ್ತದೆ. ದಿ. 29ರಂದು ಬೆಳಿಗ್ಗೆ 11:30 ಕ್ಕೆ ಕಾಮಗಾರಿಯ ಟೆಂಡರ್ ಗುತ್ತಿಗೆ ಅನುಮೋದನೆ ಆಗುತ್ತದೆ.
ಆಶ್ಚರ್ಯವೇನೆಂದರೆ ಬಿಡ್ ಟೆಂಡರ್ ಕಾಮಗಾರಿಗೆ ಅನುಮೋದನೆಯ ಪೂರ್ವದಲ್ಲಿಯೇ ಮುಖ್ಯಮಂತ್ರಿಗಳು ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮಕ್ಕೆ ಆಗಮಿಸಿ ಶಂಕು ಸ್ಥಾಪನೆ ನೆರವೇರಿಸುತ್ತಿರುವುದು ಕಾನೂನು ಬಾಹಿರವಾಗಿದೆ. ರಾಜಕೀಯ ಲಾಭಕ್ಕಾಗಿ ತರಾತುರಿಯಲ್ಲಿ ಈ ಕಾಮಗಾರಿಯ ಶಂಕು ಸ್ಥಾಪನೆ ಮಾಡಲಾಗುತ್ತಿದೆ ಎಂದು ಅವರು ಆರೋಪ ಮಾಡಿದರು.
ಬೊಮ್ಮಾಯಿ ಅವರು ಈ ಹಿಂದೆ ನೀರಾವರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದು ಕಾನೂನಿನ ಅರಿವು ಇದೆ. ಆದರೆ ಸ್ಥಳೀಯ ರಾಜಕೀಯ ಒತ್ತಡದಿಂದ ಈ ಕಾಮಗಾರಿಯ ಭೂಮಿ ಪೂಜೆ ನೆರವೇರಿಸುತ್ತಿರುವುದು ಕಾನೂನು ಬಾಹಿರವಾಗಿದೆ. ರಾಜ್ಯ ಚುನಾವಣಾ ಆಯೋಗ ಹಾಗೂ ಮತ್ತು ಜಿಲ್ಲಾಡಳಿತ ತಕ್ಷಣ ಮಧ್ಯ ಪ್ರವೇಶ ಮಾಡಬೇಕು. ಇಲ್ಲವಾದರೆ ಆಪ್ ಪಕ್ಷದಿಂದ ಕಾನೂನು ಹೋರಾಟ ಕೈಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಈ ವೇಳೆ ವಿನಾಯಕ ದೇಸಾಯಿ, ಶಿದರಾಜ ಬೋರಾಡೆ, ಗುರಪ್ಪಾ ಮಗದುಮ್, ಸುಭಾಷ ಭಾಮನೆ ಉಪಸ್ಥಿತರಿದ್ದರು.
ಈ ಕುರಿತು ಅಥಣಿ ಎಚ್ ಬಿ ಸಿ ಮುಖ್ಯ ಇಂಜಿನೀಯರರಾದ ಎಸ್ ಬಿ ಬಾಗಿ ಅವರನ್ನು ಸಂಪರ್ಕಿಸಿದಾಗ “ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯ ಟೆಂಡರ್ ಪ್ರಕ್ರಿಯೆ ಅಧಿಸೂಚನೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ರಾಜ್ಯ ನೀರಾವರಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರ ವ್ಯಾಪ್ತಿಗೆ ಒಳಪಡುತ್ತದೆ. ನಾವು ಪ್ರತಿಕ್ರಿಯಿಸಲು ಬರುವುದಿಲ್ಲ” ಎಂದು ತಿಳಿಸಿದ್ದಾರೆ.