ಪಣಜಿ, ೧೯- ಗೋವಾ ರಾಜ್ಯಕ್ಕೆ ಬರುವ ಪ್ರವಾಸಿಗರಿಗೆ ಕಿರುಕುಳ ನೀಡಿ ವಂಚಿಸುವವರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ಟ್ಯಾಕ್ಸಿ ಚಾಲಕರ ಬೆದರಿಸುವಿಕೆ ಮತ್ತು ನಿಂದನೆಯನ್ನು ಸಹಿಸಲಾಗುವುದಿಲ್ಲ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಹೇಳಿದ್ದಾರೆ.
ಗೋವಾ ರಾಜ್ಯದಲ್ಲಿ ಪ್ರವಾಸಿಗರ ಮೇಲೆ ಟ್ಯಾಕ್ಸಿ ಚಾಲಕರ ಕಿರುಕುಳ ಮತ್ತು ದೌರ್ಜನ್ಯಗಳು ನಿರಂತರ ನಡೆಯುತ್ತಿರುವ ವರದಿಗಳು ಬರುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಈ ಹೇಳಿಕೆ ನೀಡಿದ್ದು ಟ್ಯಾಕ್ಸಿ ನಿರ್ವಾಹಕರು ಪ್ರವಾಸೋದ್ಯಮದ ಭಾಗವಾಗಬೇಕು ಮತ್ತು ಅದಕ್ಕೆ ಸಹಕರಿಸಬೇಕು ಎಂದಿದ್ದಾರೆ.
ಸೋಮವಾರ ಗೋವಾದ 62ನೇ ವಿಮೋಚನಾ ದಿನವನ್ನು ಆಚರಿಸಲಾಯಿತು. 1961 ರ ಡಿಸೆಂಬರ್ 19 ರಂದು, ಗೋವಾ 450 ವರ್ಷಗಳ ಕಾಲ ಪೋರ್ಚುಗೀಸ ಆಳ್ವಿಕೆಯಿಂದ ಮುಕ್ತವಾಯಿತು. ಭಾರತೀಯ ಸೇನೆಯ ಆಪರೇಷನ್ ವಿಜಯದ ನಂತರ ಗೋವಾ ಸ್ವಾತಂತ್ರ್ಯ ಪಡೆಯಿತು. ಗೋವಾ ವಿಶ್ವವಿದ್ಯಾನಿಲಯದಲ್ಲಿ ಮುಖ್ಯಮಂತ್ರಿ ಪ್ರಮೋದ ಸಾವಂತ ಅವರು ದೇಶದ ಧ್ವಜಾರೋಹಣ ನೆರವೇರಿಸಿ ಎಲ್ಲಾ ಗೋವನ್ನರಿಗೆ ಮುಕ್ತಿ ದಿನದ ಶುಭಾಶಯ ಕೋರುತ್ತ ಮಾತನಾಡಿದರು.
ತಲಾ ಆದಾಯದಲ್ಲಿ ಗೋವಾ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ರಾಜ್ಯದಲ್ಲಿ ನಿರುದ್ಯೋಗ ದರವನ್ನು ಕಡಿಮೆ ಮಾಡಲು ನಾವು ಶ್ರಮಿಸುತ್ತಿದ್ದೇವೆ. ಮುಂಬರುವ ವರ್ಷಗಳಲ್ಲಿ ರಾಜ್ಯದಲ್ಲಿ ಹೊಸ ಉದ್ಯೋಗ ಸೃಷ್ಟಿಸುವತ್ತ ಗಮನ ಹರಿಸುತ್ತಿದ್ದೇವೆ. ಅಲ್ಲದೇ ನಾವು ಮುಖ್ಯವಾಗಿ ಮಹಿಳಾ ಸಬಲೀಕರಣದ ವಿಷಯದಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.
ರಾಜ್ಯದ ಪ್ರಗತಿಯನ್ನು ನೋಡುವುದು ನನಗೆ ಹೆಮ್ಮೆಯ ವಿಷಯ. ಗೋಲ್ಡನ್ ಗೋವಾದ ಕನಸಿಗೆ ನಾವು ಹತ್ತಿರವಾಗುತ್ತಿದ್ದೇವೆ. ಗೋವಾ ಸರ್ಕಾರವು ರಾಜ್ಯದ ವಿದ್ಯಾರ್ಥಿಗಳಿಗೆ ಕೃಷಿ ಕ್ಷೇತ್ರದಲ್ಲಿ ಶಿಕ್ಷಣ ಮತ್ತು ಉದ್ಯೋಗವನ್ನು ಒದಗಿಸಲು ಕೃಷಿ ವಿಶ್ವವಿದ್ಯಾಲಯವನ್ನು ಪ್ರಾರಂಭಿಸಿತು. ಉದ್ಯೋಗ ಮೇಳವನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ. ಭೂಕಬಳಿಕೆ ಪ್ರಕರಣದಲ್ಲಿ ಎಸ್ ಐಟಿ ರಚನೆ ಮಾಡಿ ಸೂಕ್ತ ತನಿಖೆಗೆ ಸೂಚನೆ ನೀಡಲಾಗಿದೆ. ಅಲ್ಲದೆ, ರಾಜ್ಯದಲ್ಲಿ ಗಣಿಗಾರಿಕೆ ವ್ಯವಹಾರವೂ ವ್ಯವಸ್ಥಿತವಾಗಿ ಆರಂಭವಾಗುತ್ತಿದೆ. ಕೇಂದ್ರ ಸರಕಾರ ತೆರಿಗೆ ವಿನಾಯಿತಿ ನೀಡುವುದರಿಂದ ರಾಜ್ಯ ಸರಕಾರಕ್ಕೆ ಗಣಿಗಾರಿಕೆಯಲ್ಲಿ ಲಾಭವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ರಾಜ್ಯ ಪ್ರವಾಸೋದ್ಯಮ ಸಚಿವ ರೋಹನ ಖಂವಟೆ ಮಾತನಾಡಿ, ಗೋವಾ ಟ್ಯಾಕ್ಸಿ ಆಪ್ ಸಿದ್ಧವಾಗಿದೆ. ಇದು ಮುಂದಿನ 15 ದಿನಗಳಲ್ಲಿ ಇದು ಎಲ್ಲರಿಗೂ ಲಭ್ಯವಾಗಲಿದೆ. ಮುಖ್ಯಮಂತ್ರಿ ಪ್ರಮೋದ ಸಾವಂತ ಅವರೊಂದಿಗೆ ಚರ್ಚಿಸಿದ ನಂತರ ಇದನ್ನು ಪ್ರಾರಂಭಿಸಲಾಗುವುದು ಎಂದರು.