ಅಥಣಿ, ೧೩- : ಬಿಜೆಪಿಯಿಂದ ನಿರ್ಗಮಿಸಲು ಮಾಡಿರುವ ತೀರ್ಮಾನವನ್ನು ಮರು ಪರಿಶೀಲಿಸಲು ಲಕ್ಷ್ಮಣ ಸವದಿ ಅವರನ್ನು ವಿನಂತಿಸಿಕೊಳ್ಳಲು ಅವರ ಅಥಣಿಯ ನಿವಾಸಕ್ಕೆ ತೆರಳಿದ್ದ ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜೇಶ ನೇರ್ಲಿ ಅವರನ್ನು ಸವದಿ ಬೆಂಬಲಿಗರು ತೀವ್ರ ತರಾಟೆಗೆ ತೆಗೆದುಕೊಂಡು, ಎಳೆದಾಡಿದ ಘಟನೆ ಬುಧವಾರ ನಡೆದಿದೆ.
ಅಥಣಿ ಕ್ಷೇತ್ರದಿಂದ ತಮಗೆ ಬಿಜೆಪಿಯಿಂದ ಸ್ಪರ್ಧಿಸಲು ಅವಕಾಶ ದೊರೆಯದ ಕಾರಣ ಪಕ್ಷ ತೊರೆಯಲು ಸವದಿ ದೃಢ ನಿರ್ಧಾರ ಮಾಡಿದ್ದು ತಾವು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೂ ಮತ್ತು ವಿಧಾನ ಪರಿಷತ್ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸುವ ನಿರ್ಧಾರ ಪ್ರಕಟಿಸಿದ್ದರು. ಅವರ ನಿರ್ಧಾರ ಪುನಃ ಪರಿಶೀಲಿಸುವಂತೆ ಮನವೊಲಿಸಲು ನೇರ್ಲಿ ಹಾಗೂ ಇಬ್ಬರು ಆರ್ ಎಸ್ ಎಸ್ ಸದಸ್ಯರೊಂದಿಗೆ ಸವದಿ ನಿವಾಸಕ್ಕೆ ತೆರಳಿದ್ದಾಗ ಅಲ್ಲಿದ್ದ ಸವದಿ ಬೆಂಬಲಿಗರು ಅವರ ಮೇಲೆ ಏರಿ ಹೋದರು.
ಸವದಿ ಅವರಿಗೆ ಟಿಕೆಟ್ ತಪ್ಪಿಸಿದ್ದರಲ್ಲಿ ನಿಮ್ಮ ಕೈವಾಡವೂ ಇದೆ ಎಂದು ಆರೋಪಿಸಿ ಸವದಿ ಮನೆ ಗೇಟ್ ಬಳಿ ತಡೆದು ಅವರನ್ನು ಹಿಂದಕ್ಕೆ ದೂಡಿಕೊಂಡು ಹೋದರು. ಗದ್ದಲ ಕೇಳಿ ಮನೆಯಿಂದ ಹೊರಬಂದ ಸವದಿ ಅವರು ತಮ್ಮ ಬೆಂಬಲಿಗರಿಗೆ ಸೂಚನೆ ಕೊಟ್ಟದ್ದರಿಂದ ನೇರ್ಲಿ ಮತ್ತವರೊಂದಿಗೆ ಬಂದಿದ್ದ ಇಬ್ಬರೂ ಬಚಾವಾಗಿ ಸವದಿಯವರನ್ನು ಭೆಟ್ಟಿಯಾಗದೆ ಹಿಂದಕ್ಕೆ ತೆರಳಿದರು.
ನಂತರ ಸವದಿ ಭೆಟ್ಟಿಗೆ ಬಂದ ಚಿಕ್ಕೋಡಿ ಬಿಜೆಪಿ ಸಂಸದ ಅಣ್ಣಾಸಾಹೇಬ ಜೊಲ್ಲೆಯವರೂ ಬೆಂಬಲಿಗರಿಂದ ಮತ್ತು ಖುದ್ದು ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆಯ ಬಿಸಿ ಅನುಭವಿಸಬೇಕಾಯಿತು. ಸವದಿಯವರ ಭೇಟಿ ಮಾಡಿದ ನಂತರ ಜೊಲ್ಲೆ ಸುದ್ದಿಗಾರರೊಂದಿಗೆ ಮಾತನಾಡಿ, ಟಿಕೆಟ್ ನೀಡುವ ತೀರ್ಮಾನ ಹೈಕಮಾಂಡ್ ತೆಗೆದುಕೊಳ್ಳುತ್ತದೆ. ಅದೇ ಅಂತಿಮವಾಗಿದ್ದು ಅದನ್ನು ಎಲ್ಲರೂ ಪಾಲಿಸಬೇಕು ಎಂದು ಹೇಳಿದರು.