ಬೆಳಗಾವಿ : ಗಾಂಜಾ ಹೊಂದಿದ್ದ ಆರೋಪದ ಮೇಲೆ ವಿಚಾರಣೆಗೆಂದು ಪೊಲೀಸ್ ವಶದಲ್ಲಿದ್ದ ವ್ಯಕ್ತಿ ಸಾವನಪ್ಪಿದ್ದು ಪ್ರಕರಣದ ತನಿಖೆಯನ್ನು ಸಿಅಯ್ ಡಿ ಗೆ ಒಪ್ಪಿಸಲಾಗಿದೆ.
ಬೆಳಗಾವಿ ಗ್ರಾಮೀಣ ಪೊಲೀಸರು ಗಾಂಜಾ ಹಿಂದಿದ್ದ ಆರೋಪದ ಮೇಲೆ ಬೆಲ್ಲದ ಬಾಗೇವಾಡಿ ಗ್ರಾಮದ 45 ವರುಷದ ಬಸನಗೌಡ ಈರನಗೌಡ ಪಾಟೀಲ ಎಂಬವರನ್ನು ವಿಚಾರಣೆಗೆಂದು ಶುಕ್ರವಾರ ಸಂಜೆ ವಶಕ್ಕೆ ಪಡೆದಿದ್ದರು. ಮಾರ್ಗ ಮಧ್ಯೆ ಅವರ ಆರೋಗ್ಯದಲ್ಲಿ ವ್ಯತ್ಯಾಸವಾಗಿದ್ದರಿಂದ ಕಾಕತಿಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಿ ಸುಧಾರಿಸಿದ ನಂತರ ಕಾಕತಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಮಾಡುವಾಗ ಅವರು ಪುನಃ ತೀವ್ರ ಅಸ್ವಸ್ಥಗೊಂಡರು. ರಾತ್ರಿ ಸುಮಾರು 10.30 ಗಂಟೆಗೆ ಅವರನ್ನು ಬೆಳಗಾವಿಯ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಯಿತು ಸುಮಾರು 11.30ರ ವೇಳೆ ಅವರು ಅಸುನೀಗಿದರು.
ಈ ಕುರಿತು ಮಾಹಿತಿ ನೀಡಿರುವ ಡಿಎಸ್ ಪಿ ರವೀಂದ್ರ ಗಡಾದಿ ಅವರು ಬಹುಷಃ ಹೃದಯಾಘಾತದಿಂದ ಅವರು ಅಸುನೀಗಿರುವ ಸಾಧ್ಯತೆಯಿದ್ದು ಮರಣೋತ್ತರ ವರದಿಗಾಗಿ ಕಾಯುತ್ತಿರುವದಾಗಿ ತಿಳಿಸಿದರು.
ಮೃತರ ಪತ್ನಿ ನೀಡಿದ ದೂರು ಆಧರಿಸಿ, ಪೊಲೀಸ ವಶದಲ್ಲಿದ್ದ ವ್ಯಕ್ತಿ ಸತ್ತಿದ್ದರಿಂದ ಪ್ರಕರಣದ ತನಿಖೆಯನ್ನು ಸಿಆಯ್ ಡಿ ಗೆ ನೀಡಲಾಗಿದೆ ಎಂದು ತಿಳಿಸಿದರು.
ಆದರೆ ಸತ್ಯಾಸತ್ಯತೆಗೆ ಆಗ್ರಹಿಸಿರುವ ಬೆಳಗಾವಿ ಆಮ್ ಆದ್ಮಿ ಪಾರ್ಟಿ (ಆಪ್) ಸಿಅಯ್ ಡಿ ತನಿಖೆ ಬದಲು ಸಿಬಿಅಯ್ ತನಿಖೆಗೆ ಒತ್ತಾಯಿಸಿದೆ.