ಬೆಳಗಾವಿ : ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಪರ ಚುನಾವಣೆ ಪ್ರಚಾರ ಮಾಡುವ ಕುರಿತು ಮಹಾರಾಷ್ಟ್ರದ ಬಿಜೆಪಿ ಮತ್ತು ಶಿವಸೇನೆ ಮಧ್ಯೆ ವಾಗ್ವಾದ ಉಂಟಾಗುತ್ತಿದೆ.
“ಈ ಬಾರಿ ನಮಗೆ ಗೆಲ್ಲುವ ಅವಕಾಶಗಳಿವೆ. ಆದ್ದರಿಂದ ಪಕ್ಷದ ಪರ ಚುನಾವಣೆ ಪ್ರಚಾರಕ್ಕೆ ಯಾರನ್ನೂ ಕಳುಹಿಸಬೇಡಿ” ಎಂದು ಮಹಾರಾಷ್ಟ್ರದ ಬಿಜೆಪಿ ಮತ್ತು ಕಾಂಗ್ರೆಸ್ ಗೆ ಎಂಇಎಸ್ ಮನವಿ ಮಾಡಿಕೊಂಡಿತ್ತು. ಆದರೆ ಕೇಂದ್ರ ಸಚಿವ ನಿತಿನ ಗಡ್ಕರಿ ಮತ್ತು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ ಅವರು ಕರ್ನಾಟಕದ ಮರಾಠಿ ಬಾಹುಳ್ಯದ ಕ್ಷೇತ್ರಗಳಲ್ಲಿ ತಾವು ಮಾತ್ರವಲ್ಲದೇ ತಮ್ಮ ಪಕ್ಷದ ಇತರ ಮುಖಂಡರೂ ಪ್ರಚಾರ ಮಾಡುವದಾಗಿ ಬಿಜೆಪಿ ತಿಳಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಶಿವಸೇನೆ ವಕ್ತಾರ, ಸಂಸದ (ರಾಜ್ಯಸಭೆ) ಸಂಜಯ ರಾವುತ್ ಅವರು ತಾವು ಕರ್ನಾಟಕದ ಮರಾಠಾ ವಲಯದಲ್ಲಿ ಎಂಇಎಸ್ ಪರ ಪ್ರಚಾರ ಮಾಡುವದಾಗಿಯೂ ಅದಕ್ಕೆ ಬಿಜೆಪಿಯ ಗಡಕರಿ ಮತ್ತು ಫಡ್ನವೀಸ ಬೆಂಬಲಿಸಬೇಕು ಎಂದಿದ್ದಾರೆ.
ಪಕ್ಷ ಒಂದು-ಎರಡು ಸ್ಥಾನ ಕಡಿಮೆ ಪಡೆದರೂ ಯಾವ ಹಾನಿಯೂ ಇಲ್ಲ. ಪಕ್ಷದ ಹಿತಾಸಕ್ತಿಗಿಂತ ಮರಾಠಿ ಭಾಷಿಕರ ಹಿತಾಸಕ್ತಿ ಕಾಪಾಡುವುದು ಮುಖ್ಯ. ಹಾಗಾಗಿ ಮಹಾರಾಷ್ಟ್ರದ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಬೆಳಗಾವಿಯ ಮರಾಠಿಗರ ಪರ ಸ್ಪರ್ಧೆಸಿರುವ ಸಮಿತಿಗೆ ಬೆಂಬಲ ನೀಡಬೇಕು. “ನೀವು ಸಮಿತಿ ಪರ ಪ್ರಚಾರ ಮಾಡದಿದ್ದರೂ ಪರವಾಗಿಲ್ಲ, ಆದರೆ ನಿಮ್ಮ ಪಕ್ಷಗಳ ಪರ ಪ್ರಚಾರ ಮಾಡಿ ನಮ್ಮ ಭಾಷಿಕರ ಸೋಲಿಗೆ ಕಾರಣವಾಗಬೇಡಿ” ಎಂದು ರಾವತ್ ಹೇಳಿದ್ದಾರೆ.
ಇದಕ್ಕೆ ಬಿಜೆಪಿ ಪ್ರತಿಕ್ರಿಯಿಸಿದ್ದು, ತನ್ನ ನಾಯಕರು ಕರ್ನಾಟಕದಲ್ಲಿ ಪ್ರಚಾರ ಮಾಡಲಿದ್ದಾರೆ ಎಂದು ಹೇಳಿದೆ. “ಒಂದು-ಎರಡು ಸ್ಥಾನ ಗೆಲ್ಲುವುದರಿಂದ ಎಂಇಎಸ್ ಗೆ ಆಗುವ ಪ್ರಯೋಜನವೇನು. ಅದು ಸರ್ವೋಚ್ಛ ನ್ಯಾಯಾಲಯದಲ್ಲಿರುವ ಗಡಿ ವಿವಾದದ ಪ್ರಕರಣದ ಮೇಲೂ ಯಾವ ಪರಿಣಾಮ ಬೀರದು. ಹಾಗಾಗಿ ಗಡಕರಿ, ಫಡ್ನವೀಸ ಅವರುಗಳು ಈ ವಾರ ಪ್ರಚಾರ ಮಾಡಲಿದ್ದಾರೆ” ಎಂದು ಬಿಜೆಪಿ ಬೆಳಗಾವಿ ಜಿಲ್ಲಾಧ್ಯಕ್ಷ (ಗ್ರಾಮೀಣ), ಮಾಜಿ ಶಾಸಕ ಸಂಜಯ ಪಾಟೀಲ ಸಮದರ್ಶಿಗೆ ತಿಳಿಸಿದರು.
ಮಹಾರಾಷ್ಟ್ರ ಪರ ಇರುವ ಎಂಇಎಸ್ ಕಳೆದ ಎರಡು ಚುನಾವಣೆಗಳಲ್ಲಿ ಸೋತು ರಾಜ್ಯದ ರಾಜಕೀಯ ಪಟದಿಂದ ಅಳಸಿ ಹೋಗಿದೆ. ಆದರೆ “ಈ ಬಾರಿ ನಮಗೆ ಗೆಲ್ಲುವ ಅವಕಾಶಗಳಿವೆ” ಎಂದು ತಮ್ಮ ಪಕ್ಷಗಳ ಪರ ಪ್ರಚಾರ ಮಾಡದಂತೆ ಮಹಾರಾಷ್ಟ್ರದ ಬಿಜೆಪಿ ಮತ್ತು ಕಾಂಗ್ರೆಸ್ ಗೆ ಸಮಿತಿ ಮನವಿ ಮಾಡಿಕೊಂಡಿತ್ತು. ಮಹಾರಾಷ್ಟ್ರ ಕಾಂಗ್ರೆಸ್ ಮಾತ್ರ ಈ ಕುರಿತು ಯಾವ ಪ್ರತಿಕ್ರಿಯೆ ನೀಡಿಲ್ಲ.
ಕರ್ನಾಟಕದ ಮರಾಠಿಗರ ಪರವಾಗಿರುವ ರಾಷ್ಟೀಯ ಕಾಂಗ್ರೆಸ್ ಪಕ್ಷದ (ಎನ್ ಸಿ ಪಿ ) ಯ ಮುಖ್ಯಸ್ಥ ಶರದ ಪವಾರ ಕೂಡ ಈ ಕುರಿತು ಮೌನವಾಗಿದ್ದಾರೆ.