ಉಳ್ಳಾಲ್ (ಮಂಗಳೂರು) : ಶಾಲಾ ಪರೀಕ್ಷೆಯಲ್ಲಿ ಸರಿಯಾದ ಉತ್ತರ ಬರೆದರೂ ಶಿಕ್ಷಕಿ ಕಡಿಮೆ ಅಂಕ ನೀಡಿದಕ್ಕೆ ಕೋಪಿಸಿಕೊಂಡ 6-ನೇ ತರಗತಿಯ ವಿದ್ಯಾರ್ಥಿಯೊಬ್ಬಳು ಆ ಶಿಕ್ಷಕಿಯ ಕುಡಿಯುವ ನೀರಿನ ಬಾಟಲಿಯಲ್ಲಿ ಅವಧಿ ಮೀರಿದ ಮಾತ್ರೆ ಹಾಕಿದ್ದು, ಅರಿಯದೇ ಅದನ್ನು ಕುಡಿದ ಇಬ್ಬರು ಶಿಕ್ಷಕಿಯರು ಅಸ್ವಸ್ಥಗೊಂಡ ಘಟನೆ ಒಂದು ಖಾಸಗಿ ಶಾಲೆಯಲ್ಲಿ ಶನಿವಾರ ಸಂಭವಿಸಿದೆ.
ಗಣಿತ ಪರೀಕ್ಷೆಯಲ್ಲಿ ಸರಿಯಾದ ಉತ್ತರ ಬರೆದರೂ ಶಿಕ್ಷಕಿ ತನಗೆ ಕಡಿಮೆ ಅಂಕ ನೀಡಿದ್ದಾರೆ ಎಂದು ಆರೋಪಿಸಿರುವ ವಿದ್ಯಾರ್ಥಿನಿ ಅದಕ್ಕೆ ಸೇಡು ತೀರಿಸಿಕೊಳ್ಳಲು ತಾನು ಶಿಕ್ಷಕಿಯ ಕುಡಿಯುವ ನೀರಿನ ಬಾಟಲಿಯಲ್ಲಿ ಯಾವುದೋ ಮಾತ್ರೆ ಬೆರೆಸಿದಾಗಿ ಒಪ್ಪಿಕೊಂಡಿದ್ದಾಳೆ.
ವಿದ್ಯಾರ್ಥಿನಿ ತನಗೆ ಆಪ್ತಳಾಗಿದ್ದ ತನ್ನದೇ ತರಗತಿಯ ಇನ್ನೊಬ್ಬ ವಿದ್ಯಾರ್ಥಿನಿಯೊಂದಿಗೆ ಸೇರಿ ಸ್ಟಾಫ್ ರೂಮ್ ನಲ್ಲಿ ಯಾರೂ ಇಲ್ಲದಾಗ ತೆರಳಿ ಗಣಿತ ಶಿಕ್ಷಕಿಯ ನೀರಿನ ಬಾಟಲಿಯಲ್ಲಿ ತಾನು ತೆಗೆದುಕೊಂಡು ಹೋಗಿದ್ದ ಮಾತ್ರೆಗಳನ್ನು ಹಾಕಿ ಹೋಗಿದ್ದಳು. ಇದನ್ನು ಅರಿಯದೇ ಗಣಿತ ಶಿಕ್ಷಕಿ ಉಪಹಾರ ಮುಗಿದ ನಂತರ ಅದೇ ನೀರು ಕುಡಿದಿದ್ದಾರೆ, ಜೊತೆಯಲ್ಲಿದ್ದ ಇನ್ನೊಬ್ಬ ಶಿಕ್ಷಕಿಗೂ ನೀಡಿದ್ದಾರೆ. ನೀರಿನ ಟೇಸ್ಟ್ ಬದಲಾಗಿರುವುದನ್ನು ಗಮನಿಸಿದ ಅವರು ಬಾಟಲಿ ನೋಡಲು ಅದರಲ್ಲಿ ಇನ್ನೂ ಕರಗದ ಕೆಲ ಮಾತ್ರೆಗಳು ಕಂಡು ಬಂದಿವೆ. ಮೊದಲು ನೀರು ಕುಡಿದ ಗಣಿತ ಶಿಕ್ಷಕಿ ವಾಂತಿ, ಭೇದಿಯಿಂದ ತೀವ್ರ ಅಸ್ವಸ್ಥರಾದರೆ, ಇನ್ನೊಬ್ಬ ಶಿಕ್ಷಕಿಯ ಮುಖ ಬಾತುಕೊಂಡಿದೆ. ತಕ್ಷಣ ಇಬ್ಬರನ್ನೂ ಉಳ್ಳಾಲ್ ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಈಗ ಇಬ್ಬರೂ ಸುಧಾರಿಸಿಕೊಳ್ಳುತ್ತಿದ್ದಾರೆ.
ಶಾಲೆಯ ಪ್ರಧಾನ ಮತ್ತು ಇತರ ಶಿಕ್ಷಕರು ಶಾಲೆಯ ಸ್ಟಾಫ್ ರೂಮ್ ನಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮರಾ ಗಮನಿಸಿದಾಗ ಆ ಇಬ್ಬರು ವಿದ್ಯಾರ್ಥಿನಿಯರು ನೀರಿನ ಬಾಟಲಿಯಲ್ಲಿ ಮಾತ್ರೆ ಬೆರಸಿ ತೆರಳಿರುವುದು ಕಂಡು ಬಂದಿದೆ.
ಮೊದಲು ಈ ಇಬ್ಬರು ವಿದ್ಯಾರ್ಥಿನಿಯರು ತಮ್ಮ ತಪ್ಪನ್ನು ಒಪ್ಪಿಕೊಂಡಿರಲಿಲ್ಲ. ಆದರೆ ಅವರಿಗೆ ಸಿಸಿಟಿವಿ ಕ್ಯಾಮರಾದ ದೃಶ್ಯಗಳನ್ನು ತೋರಿಸಿದಾಗ ತಮ್ಮ ತಪ್ಪನ್ನು ಒಪ್ಪಿಕೊಂಡರು. ವಿಚಾರಣೆಯಲ್ಲಿ ಮೊದಲ ವಿದ್ಯಾರ್ಥಿನಿ ತಾನು ಗಣಿತ ಪರೀಕ್ಷೆಯಲ್ಲಿ ಚೆನ್ನಾಗಿ ಮಾಡಿದ್ದರೂ, ಸರಿ ಉತ್ತರ ಬರೆದಿದ್ದರೂ ಶಿಕ್ಷಕಿ ಕಡಿಮೆ ಉತ್ತರ ನೀಡಿದ್ದಾರೆ. ಇದರಿಂದ ತರಗತಿಯಲ್ಲಿ ತನಗೆ ಅವಮಾನವೆನಿಸಿ ಸೇಡು ತೀರಿಸಿಕೊಳ್ಳಲು ಅವರ ನೀರಿನ ಬಾಟಲಿಯಲ್ಲಿ ಮನೆಯಿಂದ ತಂದಿದ್ದ ಮಾತ್ರೆಗಳನ್ನು ತನ್ನ ಗೆಳತಿಯ ಸಹಾಯದಿಂದ ಬೆರೆಸಿರುವುದಾಗಿ ತಿಳಿಸಿದಳು.
ಶಿಕ್ಷಕರು ತಕ್ಷಣವೇ ಶಾಲಾ ಸುಧಾರಣಾ ಮಂಡಳಿ ಸದಸ್ಯರ (ಎಸ್ ಡಿ ಎಂ ಸಿ ) ಸಭೆ ಕರೆದು, ವಿದ್ಯಾರ್ಥಿನಿಯರ ಪಾಲಕರನ್ನು ಕರೆದು ಅವರಿಗೆ ವಿಷಯ ತಿಳಿಸಿ, ಸಿಸಿಟಿವಿ ಕ್ಯಾಮರಾದ ದೃಶ್ಯಗಳನ್ನು ತೋರಿಸಿ ಇಬ್ಬರೂ ವಿದ್ಯಾರ್ಥಿನಿಯರನ್ನು ಶಾಲೆಯಿಂದ ಉಚ್ಛಟಿಸಿ, ಶಾಲೆಯ ಬಿಡುಗಡೆ ಸರ್ಟಿಫಿಕೇಟ್ ನೀಡಿ ಕಳುಹಿಸಿದರು.
ವಿದ್ಯಾರ್ಥಿನಿಯರ ಭವಿಷ್ಯಕ್ಕೆ ತೊಂದರೆಯಾಗಬಾರದೆಂದು ಪೊಲೀಸರಲ್ಲಿ ಪ್ರಕರಣ ದಾಖಲು ಮಾಡಿಲ್ಲ. ಅಸ್ವಸ್ಥಗೊಂಡಿರುವ ಶಿಕ್ಷಕಿಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.