ಬೆಂಗಳೂರು, ೧೩: ಕಿತ್ತೂರು ರಾಣಿ ಚನ್ನಮ್ಮ ಮತ್ತು ಟಿಪ್ಪು ಸುಲ್ತಾನ್ ಅವರುಗಳು ಸ್ವಾಭಿಮಾನಿ ಹೋರಾಟದ ಸ್ಫೂರ್ತಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಳಗಾವಿ ಜಿಲ್ಲಾಡಳಿತ ಚನ್ನಮ್ಮನ ಕಿತ್ತೂರು ಉತ್ಸವದ ಜ್ಯೋತಿ ಯಾತ್ರೆಗೆ ವಿಧಾನಸೌಧದ ಮುಂಭಾಗದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಕಿತ್ತೂರು ಚನ್ನಮ್ಮ ತನ್ನ ಸಣ್ಣ ಸೈನ್ಯದಿಂದ ಬ್ರಿಟಿಷರ ಬೃಹತ್ ಸೈನ್ಯಕ್ಕೆ ಸೆಡ್ಡು ಹೊಡೆದ ಧೀಮಂತ ರಾಣಿ. ಈಕೆಯ ಧೈರ್ಯ ಮತ್ತು ಆದರ್ಶ ಯುವ ಸಮೂಹವನ್ನು, ಇವತ್ತಿನ ಪೀಳಿಗೆಯನ್ನು ತಲುಪಬೇಕು ಎನ್ನುವ ಕಾರಣಕ್ಕೇ ನಾನು ಮೊದಲ ಬಾರಿ ಮುಖ್ಯಮಂತ್ರಿಯಾದಾಗ ಕಿತ್ತೂರು ಉತ್ಸವ ಆರಂಭಿಸಿದೆ ಎಂದು ಹೇಳಿದರು.
ಎಲ್ಲರೂ ಕಿತ್ತೂರು ರಾಣಿ ಚನ್ನಮ್ಮ ಆಗಲು ಸಾಧ್ಯವಿಲ್ಲ. ಆದರೆ, ಅವರ ಧೈರ್ಯ, ಸಾಹಸ, ದೇಶಪ್ರೇಮ ಹಾಗೂ ಸ್ವಾಭಿಮಾನವನ್ನು ಜೀವನದಲ್ಲಿ ಬೆಳಸಿಕೊಳ್ಳಬೇಕು. ಅಕ್ಟೋಬರ 23, 24 ಹಾಗೂ 25 ರಂದು ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಕಿತ್ತೂರು ಉತ್ಸವ ಆಚರಿಸಲಾಗುತ್ತಿದ್ದು, ಕಾರ್ಯಕ್ರಮದ ಯಶಸ್ಸಿಗೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಸಿದ್ದರಾಮಯ್ಯ ಕರೆ ಕೊಟ್ಟರು.
ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಿತ್ತೂರು ಉತ್ಸವದ ಲಾಂಛನವನ್ನು ಬಿಡುಗಡೆಗೊಳಿಸಿದರು. ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಶಾಸಕರಾದ ಮಹಾಂತೇಶ ಕೌಜಲಗಿ, ವಿನಯ ಕುಲಕರ್ಣಿ, ಬಾಬಾ ಸಾಹೇಬ ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಡಾ.ಕೆ. ಧರಣಿದೇವಿ ಆದಿ ಉಪಸ್ಥಿತರಿದ್ದರು.