ಬೆಳಗಾವಿ, ೫: ಬಿಜೆಪಿ ಕಾರ್ಯಕರ್ತ ಪೃಥ್ವಿಸಿಂಗ್ಗೆ ಚಾಕು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪುತ್ರ ಜಸಪೀರ ಸಿಂಗ್ ಎಪಿಎಂಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮತ್ತು ಅವರ ಸಹವರ್ತಿಗಳಾದ ಸುಜೀತ ಜಾಧವ, ಇಬ್ಬರು ಗನ್ ಮ್ಯಾನ್ ಮತ್ತು ಸದ್ದಾಮ ಎನ್ನುವವರ ವಿರುದ್ಧ ಕೊಲೆ ಯತ್ನ, ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಹಾಕಿದ್ದರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಕುರಿತು ಪತ್ರಕರ್ತರಿಗೆ ಜಸಬೀರ ಸಿಂಗ್ ಮಂಗಳವಾರ ಮಾಹಿತಿ ನೀಡಿದರು. “2018ರ ಚುನಾವಣೆಯಲ್ಲಿ ಹಿಂಡಲಗಾ ಸಮೀಪದ ಜಯನಗರದಲ್ಲಿ ನಮ್ಮ ಮನೆಯನ್ನು ಚುನಾವಣೆ ಕೆಲಸಕ್ಕೆ ಬಾಡಿಗೆಗೆ ತೆಗೆದುಕೊಂಡಿದ್ದರು. ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೆ ಒಟ್ಟು 10 ಲಕ್ಷ ರೂಪಾಯಿ ಕೊಡುವ ಕುರಿತು ಕರಾರು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಲೀಸ್ ಒಪ್ಪಂದದಂತೆ ಅವರು ನಡೆದುಕೊಂಡಿಲ್ಲ ಎಂದು ತಿಳಿಸಿದರು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೃಥ್ವಿರಾಜ ಪತ್ರಕರ್ತರ ಮುಂದೆ ಹೇಳಿಕೆ ನೀಡಿದ್ದು “ತಾವು ಬಿಜೆಪಿ ಸೇರಿದ ಮೇಲೆ ರಾಜ್ಯ ಎಸ್ ಸಿ ಮೋರ್ಚಾಗೆ ಅವಿರೋಧ ಆಯ್ಕೆಯಾದೆ. ಆಗ ಲಕ್ಷ್ಮೀ ಹೆಬ್ಬಾಳ್ಕರ ಮತ್ತು ನಮ್ಮ ನಡುವಿನ ಸಂಬಂಧ ಸರಿಯಾಗಿ ಉಳಿಯಲಿಲ್ಲ. ಬಿಜೆಪಿ ಸೇರಿದ ಮೇಲೆ ಕೆಲವು ಮೊಬೈಲ್ ಸಂಖ್ಯೆಯಿಂದ ನನಗೆ ಬೆದರಿಕೆ ಕರೆಗಳು ಬರಲು ಪ್ರಾರಂಭವಾದವು. ಈ ಕುರಿತು ಪೊಲೀಸ್ ಆಯುಕ್ತರಿಗೆ 2021 ರ ಫೆಬ್ರವರಿಯಲ್ಲಿ ದೂರು ಕೂಡ ಕೊಟ್ಟಿದ್ದೆ. ಡಿಸೆಂಬರ 4 ರಂದು ಚನ್ನರಾಜ ಬಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದರು. ಅಲ್ಲದೇ ನನ್ನ ಬಳಿಯಿರುವ ಮೊಬೈಲ್ ಕಸಿದುಕೊಂಡರು. ಆಗ ನೂಕಾಟ ತಳ್ಳಾಟ ನಡೆಯಿತು. ಅಗ ಸುಜೀತ ನನ್ನ ಹಿಡಿದುಕೊಂಡ ಮತ್ತೊಂದೆಡೆ ಸದ್ದಾಮ ಹಲ್ಲೆ ಮಾಡಿದ್ದಾನೆ. ಹರಿತವಾದ ಆಯುಧದಿಂದ ನನ್ನ ಕೈಗೆ ಹಲ್ಲೆ ಮಾಡಿದ್ದು, ಇದಕ್ಕೆ ಚನ್ನರಾಜ ಹಟ್ಟಿಹೊಳಿ ಪ್ರೋತ್ಸಾಹ ನೀಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.