ಬೆಂಗಳೂರು: ವಿವಿಧ ಶಾಲೆಗಳ ಮಕ್ಕಳ ಬ್ಯಾಗ್ಗಳಲ್ಲಿ ಹಲವು ಆಘಾತಕಾರಿ ವಸ್ತುಗಳಿರುವುದು ಬೆಳಕಿಗೆ ಬಂದಿದ್ದು, ಶಾಲಾ ಸಿಬ್ಬಂದಿಯಲ್ಲಿ ಆಘಾತ ಉಂಟು ಮಾಡಿದೆ.
ಮಕ್ಕಳ ಏಕಾಗ್ರತೆ ಮತ್ತು ಕಲಿಕೆಗೆ ಸ್ಮಾರ್ಟ್ಫೋನ್ಗಳಿಂದ ಭಂಗ ಬರುತ್ತಿದೆ. ಇದೇ ಕಾರಣಕ್ಕೆ ಶಾಲೆಗಳಿಗೆ ಸ್ಮಾರ್ಟ ಫೋನ್ ತರುವಂತಿಲ್ಲ ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಂದಾಗಿರುವ ಹಲವು ಶಾಲೆಗಳಲ್ಲಿ ವಿದ್ಯಾರ್ಥಿಗಳ ಬ್ಯಾಗ್ಗಳನ್ನು ತಪಾಸಣೆಗೆ ಒಳಪಡಿಸುತ್ತಿವೆ. ಈ ವೇಳೆ ಕೆಲ ಮಕ್ಕಳ ಬ್ಯಾಗ್ಗಳಲ್ಲಿ ಸ್ಮಾರ್ಟ್ಫೋನ್ಗಳು, ಜೊತೆಗೆ ಕಾಂಡೋಮ್ಗಳು, ಗರ್ಭನಿರೋಧಕ ಮಾತ್ರೆಗಳು, ಲೈಟರ್ಗಳು, ಸಿಗರೇಟ್ಗಳು, ಮತ್ತೇರಿಸುವ ವಾಸನೆ ಹೊಂದಿರುವ ವೈಟ್ನರ್ಗಳು ಮತ್ತು ಹೆಚ್ಚಿನ ಮೊತ್ತದ ನಗದು ಪತ್ತೆಯಾಗಿವೆ.
ಈ ಬೆಳವಣಿಗೆಯು ಹಲವು ಶಾಲೆಗಳ ಬೋಧಕ ಸಿಬ್ಬಂದಿಯಲ್ಲಿ ಆಘಾತ ಉಂಟು ಮಾಡಿದೆ. ತರಗತಿಗೆ ವಿದ್ಯಾರ್ಥಿಗಳು ಮೊಬೈಲ್ ಫೋನ್ ತರುತ್ತಾರೆ, ಅದರಿಂದ ಕಿರಿಕಿರಿ ಆಗುತ್ತಿದೆ ಎಂದು ಶಿಕ್ಷಕರು ಇತ್ತೀಚೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ವಿದ್ಯಾರ್ಥಿಗಳ ಬ್ಯಾಗ್ ಗಳನ್ನು ಪರಿಶೀಲಿಸುವಂತೆ ಕರ್ನಾಟಕ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ ತನ್ನ ಸದಸ್ಯ ಶಾಲೆಗಳಿಗೆ ಸೂಚಿಸಿತ್ತು.
ಪ್ರೌಢಶಾಲೆಗಳ 8, 9 ಮತ್ತು 10ನೇ ತರಗತಿಯ ಕೆಲ ವಿದ್ಯಾರ್ಥಿಗಳ ಬ್ಯಾಗ್ ಗಳಲ್ಲಿ ಕಾಂಡೋಮ್ ಗಳು, ಗರ್ಭ ನಿರೋಧಕ ಮಾತ್ರೆಗಳು, ಸಿಗರೇಟಗಳು, ವೈಟನರ್ ಮುಂತಾದ ವಸ್ತುಗಳು ಸಿಕ್ಕಿವೆ. ಓರ್ವ ವಿದ್ಯಾರ್ಥಿಯ ನೀರಿನ ಬಾಟಲಿಯಲ್ಲಿ ಸಾರಾಯಿ ಪತ್ತೆಯಾಗಿದೆ.
ಈ ವಿಷಯವನ್ನು ಈಗಾಗಲೇ ಶಿಕ್ಷಕರು ಸಂಬಂಧಪಟ್ಟ ಪಾಲಕರಿಗೆ ತಿಳಿಸಿದ್ದಾರೆ. ತಪ್ಪಿತಸ್ಥ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಹಾಕುವ ಬದಲು ಅವರಿಗೆ ಕೌನ್ಸಲಿಂಗ್ ಕೊಡಿಸಲು ಶಾಲೆ ಆಡಳಿತ ಮಂಡಳಿ ಮತ್ತು ಪಾಲಕರು ಮುಂದಾಗಿದ್ದಾರೆ.
10ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳ ಬ್ಯಾಗ್ ನಲ್ಲಿ ಕಾಂಡೋಮ್ ಸಿಕ್ಕಿದೆ. ಶಿಕ್ಷಕರು ಕೇಳಿದಾಗ, ಇದು ನನ್ನದಲ್ಲ, ಫ್ರೆಂಡ್ ದು ಎಂದು ಕುಂಟು ನೆಪ ಹೇಳಿದ್ದಾಳೆ. ಈ ವಿಷಯವನ್ನು ಕಾಮ್ಸ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ ಧೃಢಪಡಿಸಿದ್ದಾರೆ.