ಬೆಳಗಾವಿ : ಬೆಳಗಾವಿ ನಗರದ ಟಿಳಕವಾಡಿ ಮೂರನೇ ಗೇಟ್ ನ ರಸ್ತೆ ಓವರ್ ಬ್ರಿಡ್ಜ್ ಉದ್ಘಾಟನೆ ಕಾರ್ಯಕ್ರಮಕ್ಕೆ ಹುಬ್ಬಳ್ಳಿಯಲ್ಲಿ ವಿಭಾಗೀಯ ಕಛೇರಿ ಹೊಂದಿರುವ ನೈರುತ್ಯ ರೈಲ್ವೆ ಉದ್ದೇಶ ಪೂರ್ವಕವಾಗಿಯೇ ಕಾಂಗ್ರೆಸ್ ಶಾಸಕರಾದ ಸತೀಶ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ ಹೆಸರನ್ನು ಸಮಾರಂಭದ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಿಲ್ಲವೆಂದು ಕಾಂಗ್ರೆಸ್ ಆರೋಪಿಸಿದೆ.
ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಬೆಳಗಾವಿ ಬಿಜೆಪಿ ಸಂಸದೆ ಮಂಗಳಾ ಅಂಗಡಿ ಮತ್ತು ಬೆಳಗಾವಿ ದಕ್ಷಿಣ ಬಿಜೆಪಿ ಶಾಸಕ ಅಭಯ ಪಾಟೀಲ ಅವರ ಲಭ್ಯತೆಯನ್ವಯ ಉದ್ಘಾಟನೆ ದಿನಾಂಕವನ್ನು ನಿಗದಿಪಡಿಸಿ ಅವರ ನಿರ್ದೇಶನದಂತೆ ಆಮಂತ್ರಣ ಪತ್ರಿಕೆ ಸಿದ್ದಪಡಿಸಿದೆ ಎಂದು ಕಾಂಗ್ರೆಸ್ ಹೇಳಿದೆ. ಈ ಕುರಿತು ವಾದ ವಿವಾದ ತಪ್ಪಿಸಲೆಂದು ಕಾಂಗ್ರೆಸನ ಕೆಲ ಶಾಸಕರ ಹೆಸರನ್ನು ನಮೂದಿಸಲಾಗಿದೆ ಎಂದಿದೆ.
381ನೇ ಲೆವೆಲ್ ಕ್ರಾಸ್ಸಿಂಗ್ ನಲ್ಲಿ 27 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ರಸ್ತೆ ಮೇಲ್ಸೇತುವೆಯನ್ನು ಕಾರಜೋಳ ಮತ್ತು ಮಂಗಳಾ ಅಂಗಡಿ ಲೋಕಾರ್ಪಣೆ ಮಾಡುವರು, ಶಾಸಕ ಅಭಯ ಪಾಟೀಲ ಅಧ್ಯಕ್ಷತೆ ವಹಿಸುವರು, ಬಿಜೆಪಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ವಿಶೇಷ ಆಮಂತ್ರಿತರು ಎಂದು ನಮೂದಿಸಿರುವ ಇಲಾಖೆ ಈ ಕ್ಷೇತ್ರಕ್ಕೆ ಸಂಬಂಧವಿರದ ಬೆಳಗಾವಿ ಬಿಜೆಪಿ ಶಾಸಕ ಅನಿಲ ಬೆನಕೆ ಮತ್ತು ಕಾಂಗ್ರೆಸ್ ನ ಚುನಾಯಿತ ಪ್ರತಿನಿಧಿಗಳ ಹೆಸರು ನಮೂದಿಸಿದೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ ಮತ್ತು ಯಮಕನಮರಡಿ ಕ್ಷೇತ್ರದ ಸತೀಶ ಜಾರಕಿಹೊಳಿ ಅವರ ಕೆಲ ಪ್ರದೇಶಗಳು ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಬರುತ್ತವೆ, ಹಾಗಾಗಿ ಅವರಿಗೂ ಈ ಕ್ಷೇತ್ರದ ಮೇಲೆ ಹಕ್ಕಿದೆ. ಆದರೆ ಬಿಜೆಪಿಯ ಅನತಿಯಂತೆ ಇವರಿಬ್ಬರ ಹೆಸರನ್ನು ಉದ್ದೇಶಪೂರ್ವಕವಾಗಿ ಕೈ ಬಿಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕೆಪಿಸಿಸಿ ಕಾರ್ಯಧ್ಯಕ್ಷರೂ ಆಗಿರುವ ಸತೀಶ ಜಾರಕಿಹೊಳಿ ಅವರನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸುವುದೇ ಬಿಜೆಪಿಯ ಗುರಿ ಎಂದು ಈಗಾಗಲೇ ಸಾರಿರುವ ಬಿಜೆಪಿ ಪಕ್ಷವು ಶಾಸಕ ಉಮೇಶ ಕತ್ತಿ ಮತ್ತು ಅಭಯ ಪಾಟೀಲ ಅವರಿಗೆ ಈ ಜವಾಬ್ದಾರಿ ವಹಿಸಿತ್ತು. ಕತ್ತಿ ಇತ್ತೀಚಿಗೆ ಹೃದಯಘಾತದಿಂದ ನಿಧನರಾಗಿದ್ದಾರೆ.