ಬೆಂಗಳೂರು: ವಿಧಾನಸಭೆ ಚುನಾವಣೆ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಲು ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ರಾಜೀವ ಕುಮಾರ ನೇತೃತ್ವದ ನಿಯೋಗ ಬೆಂಗಳೂರಿಗೆ ಬಂದಿದೆ. ವಿಕಾಸಸೌಧದಲ್ಲಿ ಗುರುವಾರ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಜೊತೆ ಸಭೆ ನಡೆಸಿದ್ದು ಈ ವೇಳೆ ಕಾಂಗ್ರೆಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಹಲವು ವಿಚಾರಗಳನ್ನು ಆಯೋಗದ ಮುಂದಿಟ್ಟಿವೆ. ಈ ವೇಳೆ ಮತಪಟ್ಟಿಯಿಂದ ಹೆಸರು ಕೈಬಿಟ್ಟಿರುವುದು, ಚಿಲುಮೆ ಸಂಸ್ಥೆಯ ಅಕ್ರಮ ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ ಎಂದು ಕಾಂಗ್ರೆಸ್ ಹೇಳಿದೆ.
ಆಯೋಗದ ಜತೆ ಮಾತುಕತೆ ನಡೆಸಿದ ಬಳಿಕ ಕಾಂಗ್ರೆಸ್ ನಾಯಕ ವಿ.ಎಸ್ ಉಗ್ರಪ್ಪ ಪತ್ರಕರ್ತರಿಗೆ ಮಾಹಿತಿ ನೀಡಿದರು. ಕೈಬಿಟ್ಟ 33 ಲಕ್ಷ ಮತದಾರರನ್ನು ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿ, ಚಿಲುಮೆ ಸಂಸ್ಥೆ ಅಕ್ರಮದ ಬಗ್ಗೆ ಮಾಹಿತಿ ನೀಡಿದ್ದೇವೆ. ಚಿಲುಮೆ ಸಂಸ್ಥೆ ಅಕ್ರಮದ ತನಿಖಾ ವರದಿಯನ್ನು ಬಹಿರಂಗಪಡಿಸಲು ಒತ್ತಾಯಿಸಿದ್ದೇವೆ. ಮತ ಸೆಳೆಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸತತವಾಗಿ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ರಾಜ್ಯ ಸರ್ಕಾರವು ತರಾತುರಿಯಲ್ಲಿ ಟೆಂಡರ್ ಕರೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ನೀತಿ ಸಂಹಿತೆ ಜಾರಿಗೊಳಿಸಬೇಕೆಂದು ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶ ಹಾಗೂ ಗುಜರಾತ್ ಸೇರಿದಂತೆ ಬಿಜೆಪಿ ಗೆಲುವು ಸಾಧಿಸಿದ ರಾಜ್ಯಗಳಲ್ಲಿ ಬಳಕೆ ಮಾಡಿದ್ದ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ರಾಜ್ಯದಲ್ಲಿ ಬಳಸಬಾರದು. 224 ಕ್ಷೇತ್ರದಲ್ಲಿ ಒಂದೇ ಹಂತದಲ್ಲಿ ಚುನಾವಣೆ ಮಾಡಬೇಕು. ಸೂಕ್ಷ್ಮ ಮತಗಟ್ಟೆಯಯಲ್ಲಿ ಅರೆಸೇನಾ ಪಡೆಗಳನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಬೇಕು. ಮೂರು ವರ್ಷ ಒಂದೇ ಕಡೆ ಕೆಲಸ ಮಾಡಿದ ಅಧಿಕಾರಿಗಳನ್ನು ಬದಲಾವಣೆ ಮಾಡಬೇಕು ಎಂಬುದಾಗಿ ಮನವಿ ಮಾಡಲಾಗಿದೆ ಎಂದು ಉಗ್ರಪ್ಪ ತಿಳಿಸಿದ್ದಾರೆ.
ರಾಜೀವ ಕುಮಾರ ನೇತೃತ್ವದ ನಿಯೋಗ ರಾಜ್ಯದಲ್ಲಿ ಮೂರು ದಿನಗಳ ಪ್ರವಾಸ ಹಮ್ಮಿಕೊಂಡಿದೆ. ನಿಯೋಗದಲ್ಲಿ ಚುನಾವಣಾ ಆಯುಕ್ತರಾದ ಅನೂಪ ಚಂದ್ರಪಾಂಡೆ, ಅರುಣ ಗೋಯಲ್ ಹಾಗೂ ಉಪ ಆಯುಕ್ತರು ಸೇರಿದಂತೆ ಆಯೋಗದ ಹಿರಿಯ ಅಧಿಕಾರಿಗಳು ಇದ್ದಾರೆ. ಮಾರ್ಚ 10 ರಂದು ನಿಯೋಗವು 34 ಜಿಲ್ಲಾ ಚುನಾವಣಾಧಿಕಾರಿಗಳೊಂದಿಗೆ ಚುನಾವಣೆಯ ಪೂರ್ವಭಾವಿ ತಯಾರಿ ಕುರಿತು ಸಭೆ ನಡೆಸಲಿದೆ. ಮಾರ್ಚ 11ರಂದು ಅಪರಾಹ್ನದ ನಂತರ ಮೂರು ದಿನಗಳ ತಮ್ಮ ಭೇಟಿಯ ಕುರಿತು ಪತ್ರಿಕಾಗೋಷ್ಠಿ ನಡೆಸಿ ನವದೆಹಲಿಗೆ ಪ್ರಯಾಣ ಬೆಳಸಲಿದೆ. ನಂತರ ರಾಜ್ಯದ ಚುನಾವಣೆ ದಿನಾಂಕ ಪ್ರಕಟಕ್ಕೆ ಸಂಬಂಧಿಸಿದ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ.