ಬೆಳಗಾವಿ : ರಾಜ್ಯದಲ್ಲಿನ ಭ್ರಷ್ಟಾಚಾರಕ್ಕೆ ಕಾಂಗ್ರೆಸ್ ಕಾರಣ. ಕಾಂಗ್ರೆಸ್ ಮತ್ತು ಭ್ರಷ್ಟಾಚಾರಕ್ಕೆ ಅವಿನಾಭವ ಸಂಬಂಧವಿದೆ. ಕಾಂಗ್ರೆಸ್ ಭ್ರಷ್ಟಾಚಾರದ ತಾಯಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವಿಧಾನ ಪರಿಷತ್ ಸದಸ್ಯ, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಇಬ್ಬರು ಗಂಡು ಮಕ್ಕಳ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಸೋಮವಾರ ಬೆಳಗಾವಿಗೆ ಆಗಮಿಸಿದ್ದ ಅವರು ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾಂಗ್ರೆಸ್ ತನ್ನ ಸದಸ್ಯರ ಭ್ರಷ್ಟಾಚಾರ ಮುಚ್ಚಿಹಾಕಲು ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿ ಭ್ರಷ್ಟಾಚಾರ ನಿರ್ಮೂಲನ ಸಂಸ್ಥೆ ರೂಪಿಸಿತ್ತು. ಆದರೆ ನ್ಯಾಯಾಲಯ ಭ್ರಷ್ಟಾಚಾರ ನಿರ್ಮೂಲನ ಸಂಸ್ಥೆ ರದ್ದುಗೊಳಿಸಿ ಲೋಕಾಯುಕ್ತ ಸಂಸ್ಥೆಯನ್ನು ಪುನಃ ಸ್ಥಾಪಿಸಿತು. ಇದು ಕಾಂಗ್ರೆಸ್ ಗಾದ ದೊಡ್ಡ ಹೊಡೆತ. ಕಾಂಗ್ರೆಸ್ ಪ್ರಾಮಾಣಿಕವಾಗಿದ್ದರೆ ಲೋಕಾಯುಕ್ತ ರದ್ದುಗೊಳಿಸಿದ್ದು ಯಾಕೆ ಎಂದು ಕೇಳಿದರು.
ಭ್ರಷ್ಟಾಚಾರ ನಿರ್ಮೂಲನ ಸಂಸ್ಥೆ ತಮ್ಮ ಅಧೀನದಲ್ಲಿರುವದರಿಂದ ತಾವು ಹೇಳಿದಂತೆ ಪ್ರಕರಣಗಳನ್ನು ನಿಯಂತ್ರಿಸಬಹುದೆಂದು ಕಾಂಗ್ರೆಸ್ ಭಾವಿಸಿಕೊಂಡಿತ್ತು ಎಂದು ಅವರು ಹೇಳಿದರು.
ಒಂದು ಪುಟ್ಟ ಮಳೆಗೂ ಬೆಂಗಳೂರಿನಲ್ಲಿ ರಸ್ತೆಯ ಮೇಲೆ ನೀರು ನಿಲ್ಲಲು ಕಾಲುವೆಗಳ ಅತಿಕ್ರಮಣವೇ ಕಾರಣ. ಕಾಂಗ್ರೆಸ್ ಆಡಳಿತದಲ್ಲಿ ಚಿಕ್ಕ ಪುಟ್ಟ ಕಾಲುವೆಗಳು ಸೇರಿದಂತೆ ರಾಜ ಕಾಲುವೆಗಳೆಲ್ಲವೂ ಅತಿಕ್ರಮಣಗೊಂಡಿವೆ, ರಾಜಧಾನಿಯ ದೂರವಸ್ಥೆಗೆ ಕಾಂಗ್ರೆಸ್ ಕಾರಣ ಎಂದು ಮುಖ್ಯಮಂತ್ರಿ ತಿಳಿಸಿದರು.
ಕಾಂಗ್ರೆಸ್ ನ “ಪ್ರಜಾಧ್ವನಿ” ಸಭೆಗಳ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಬೆಂಗಳೂರು ಇಲ್ಲವೇ ರಾಜ್ಯದ ಯಾವುದೋ ಒಂದು ಕಡೆ ಸಭೆ ಏರ್ಪಡಿಸಿದರೆ ಜನ ಸೇರಲಾರರೆಂದು ವಿವಿಧ ಕಡೆ ಸಭೆ ಏರ್ಪಡಿಸಲಾಗುತ್ತಿದೆ. ಭ್ರಷ್ಟಾಚಾರದ ಕುರಿತು ಅಧಿವೇಶನದಲ್ಲಿ ಪ್ರಸ್ತಾಪಸಲು ಕಾಂಗ್ರೆಸ್ ಇಂದು ವಾರ ಮುಂಚಿತವಾಗಿ ನೋಟೀಸ್ ನೀಡಿತ್ತು. ಆದರೆ ವಿಷಯ ಕೈಗೆತ್ತಿಕೊಳ್ಳಲು ಅಧಿವೇಶನದಲ್ಲಿ ಅದರ ಸುಳಿವೇ ಇರಲಿಲ್ಲ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನ ಭ್ರಷ್ಟಾಚಾರವನ್ನು ಬಿಚ್ಚಿಡುವೆವು. ಭ್ರಷ್ಟಾಚಾರದಲ್ಲಿ ತೊಡಗಿದ್ದ ಯಾರನ್ನೂ ಸುಮ್ಮನೆ ಬಿಡುವದಿಲ್ಲ ಮುಖ್ಯಮಂತ್ರಿ ತಿಳಿಸಿದರು.
ಇದೇ ದಿ 28 ರಂದು ಕೇಂದ್ರ ಗೃಹ ಸಚಿವ ಅಮಿತ ಷಾ ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದೂ ಮುಖ್ಯಮಂತ್ರಿಗಳು ತಿಳಿಸಿದರು.