ಜೈಪುರ: ಫ್ಯಾಸಿಸ್ಟ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವ ಸಾಮರ್ಥ್ಯ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಇದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆಎ.
ಶುಕ್ರವಾರ ಕಾಂಗ್ರೆಸ್ ಪಕ್ಷದ ಭಾರತ ಜೋಡೋ ಯಾತ್ರೆ 100 ದಿನ ಪೂರೈಸಿದ ಸಂದರ್ಭದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಿದರು.
ಕಾಂಗ್ರೆಸ್ ಪಕ್ಷದ ಬಗ್ಗೆ ಯಾರೂ ಅಂಡರ್ ಎಸ್ಟಿಮೇಟ ಮಾಡಬಾರದು. ಕಾಂಗ್ರೆಸ್ ಸೈದ್ಧಾಂತಿಕವಾಗಿ ನಡೆಯುತ್ತಿರುವ ಪಕ್ಷ. ಬಿಜೆಪಿ ವಿರುದ್ಧ ಹೋರಾಡಲು ಸಿದ್ಧವಿಲ್ಲದವರು ಮತ್ತು ಭ್ರಷ್ಟರು ಎಂಬ ಕಾರಣಕ್ಕೆ ಒತ್ತಡಕ್ಕೆ ಮಣಿಯುವವರು ಕಾಂಗ್ರೆಸ್‌ಗೆ ಅಗತ್ಯವಿಲ್ಲ. ಪಕ್ಷ ತೊರೆಯಲು ಬಯಸುವವರಿಗೆ ಬಾಗಿಲು ತೆರೆದಿದೆ ಎಂದಿದ್ದಾರೆ.
ಬಹಳಷ್ಟು ಜನ ಕಾಂಗ್ರೆಸ್ ಪಕ್ಷದ ಕಥೆ ಮುಗಿದು ಹೋಗಿದೆ ಎಂದು ಭಾವಿಸಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷವನ್ನು ಎಂದಿಗೂ ಮುಗಿಸಲು ಸಾಧ್ಯವಿಲ್ಲ. ಬಿಜೆಪಿಯನ್ನು ಅಧಿಕಾರದಿಂದ ಕಾಂಗ್ರೆಸ್ ಪಕ್ಷವೇ ಕಿತ್ತೊಗೆಯಲಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಅನ್ನು ಯಾರೂ ಕಡಿಮೆ ಅಂದಾಜು ಮಾಡಬಾರದು ಎಂದು ಹೇಳಿದ ರಾಹುಲ್ ಗಾಂಧಿ, ಕೋಟ್ಯಾಂತರ ಪಕ್ಷದ ಕಾರ್ಯಕರ್ತರೇ ಪಕ್ಷದ ಶಕ್ತಿಯಾಗಿದ್ದಾರೆ. ನಾವು ನಮ್ಮ ಕಾರ್ಯಕರ್ತರನ್ನು ಚೆನ್ನಾಗಿ ಬಳಸಿಕೊಂಡರೆ ಮುಂದಿನ ಚುನಾವಣೆಯಲ್ಲಿ ರಾಜಸ್ಥಾನದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಲು ಸಾಧ್ಯವಾಗುತ್ತದೆ ಎಂದರು.
ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ತೊರೆಯುತ್ತಿರುವ ನಾಯಕರ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇತ್ತೀಚೆಗೆ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದೆ ಎಂದು ಹೇಳಿದರು.
“ಕೆಲವರು ಕಾಂಗ್ರೆಸ್ ಪಕ್ಷವನ್ನು ತೊರೆಯಲು ಬಯಸಿದರೆ, ಬಿಜೆಪಿಯನ್ನು ಎದುರಿಸಲು ಧೈರ್ಯವಿಲ್ಲದಿದ್ದರೆ, ಅವರು ಪಕ್ಷವನ್ನು ತೊರೆಯಬಹುದು. ನಮಗೆ ಅವರು ಬೇಡ, ನಮಗೆ ಕಾಂಗ್ರೆಸ್ ಪಕ್ಷವನ್ನು, ಸಿದ್ಧಾಂತವನ್ನು ನಂಬುವವರು ಬೇಕು. ಬಿಜೆಪಿ ಫ್ಯಾಸಿಸ್ಟ ಪಕ್ಷ ಎಂದು ರಾಹುಲ್ ನುಡಿದರು.