ಬೆಂಗಳೂರು, ೨- “ಕೈಲಾಗದವರು ಮೈ ಪರಚಿಕೊಂಡಂತಿದೆ ಕರ್ನಾಟಕ ಬಿಜೆಪಿಯ ಸ್ಥಿತಿ ಇದೆ. 1 ಡಾಲರ್ಗೆ 15 ರೂಪಾಯಿ, ರೈತರ ಆದಾಯ ಡಬಲ್, 2022ರಲ್ಲಿ ಎಲ್ಲರಿಗೂ ವಸತಿ ಎಂದು ಸುಳ್ಳು ಭರವಸೆ ಕೊಟ್ಟು ವಂಚಿಸಿದವರಿಗೆ ಕಾಂಗ್ರೆಸ್ ಬಗ್ಗೆ ಮಾತಾಡುವ ನೈತಿಕತೆ ಇದೆಯೇ?” ಎಂದು ಪ್ರಶ್ನಿಸಿದೆ. “ನಾವು ಪ್ರಶ್ನೆಗಳಿಗೆ ಹೆದರಿ ಓಡುವವರಲ್ಲ, ಬಿಜೆಪಿಗೆ ತಾಕತ್ತಿದ್ದರೆ ಮೋದಿಯವರಿಂದ ಒಂದೇ ಒಂದು ಪತ್ರಿಕಾಗೋಷ್ಠಿ ಮಾಡಿಸಲಿ” ಎಂದು ಸವಾಲು ಹಾಕಿದೆ.
ಕರ್ನಾಟಕ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ನೀಡಿದ್ದ ೫ ಗ್ಯಾರಂಟಿಗಳ ಜಾರಿಯ ಕುರಿತು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವರಣೆ ನೀಡಿದ್ದು ಅದರ ಬಳಿಕ ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿ ರಾಜ್ಯ ಬಿಜೆಪಿ ನಾಯಕರನ್ನು ಕಾಲೆಳೆದಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲ್, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಯವರನ್ನು ಟ್ವೀಟ್ನಲ್ಲಿ ಟ್ಯಾಗ್ ಮಾಡಲಾಗಿದೆ.
“ಕಟೀಲ್ ಅವರೇ, ನಿಮ್ಮ ಮನೆಗೂ 200 ಯುನಿಟ್ ವಿದ್ಯುತ್ ಉಚಿತ! ಬೊಮ್ಮಾಯಿಯವರೇ, ನಿಮ್ಮ ಮನೆಗೂ ಉಚಿತ! ಶೋಭಾ ಕರಂದ್ಲಾಜೆ ಅವರೇ, ನಿಮಗೂ ಪ್ರಯಾಣ ಉಚಿತ! ಸಿ.ಟಿ.ರವಿ ಅವರೇ, ನಿಮ್ಮ ಮನೆಯವರಿಗೂ ರೂ.2000 ಉಚಿತ! ಬಜರಂಗದಳದ ನಿರುದ್ಯೋಗಿಗಳಿಗೂ ಯುವನಿಧಿಯಡಿ ರೂ. 2000 (ಪದವಿ ಪಡೆದಿದ್ದವರಿದ್ರೆ ಮಾತ್ರ)! ಇದು ನಮ್ಮ ಗ್ಯಾರಂಟಿ” ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
“ನಾವು ನುಡಿದಂತೆ ನಡೆಯುವವರು, ಮಾತು ಉಳಿಸಿಕೊಳ್ಳುವವರು. ಐದೂ ಗ್ಯಾರಂಟಿಗಳನ್ನು ಜಾರಿಗೊಳಿಸಿ ಇತಿಹಾಸ ಸೃಷ್ಟಿಸಿದ್ದೇವೆ. ಇದು ನಮ್ಮ ಬದ್ಧತೆ” ಎಂದು ಕಾಂಗ್ರೆಸ್ ತಿಳಿಸಿದೆ.
ಈ ಕುರಿತು ಬಿಜೆಪಿ ಪ್ರತಿಕ್ರಿಯಿಸಿ “ಪ್ರತಿ ಮನೆಗೂ 200 ಯುನಿಟ್ ವಿದ್ಯುತ್ ಉಚಿತ ಎಂದು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ, ಕಾಂಗ್ರೆಸ್ ಅಭ್ಯರ್ಥಿಗಳು ಮನೆಮನೆಗೆ ಹೋಗಿ ಕೂಗಿದರು. ಈಗ ಒಂದು ವರ್ಷದ ಸರಾಸರಿ ವಿದ್ಯುತ್ ಬಳಕೆ ಎಷ್ಟಿತ್ತೋ, ಅದರ ಮೇಲೆ 10% ಅಷ್ಟು ಮಾತ್ರ ಉಚಿತ ಎಂದು ಜನರಿಗೆ ಶಾಕ್ ನೀಡುತ್ತಿದ್ದಾರೆ. ಎರಡು ನಾಲಗೆಯ ಇಬ್ಬಂದಿ ಪಕ್ಷ ಕಾಂಗ್ರೆಸ್ ಎಂದು ಟ್ವೀಟ್ ಮಾಡಿದೆ.