ಬೆಳಗಾವಿ : ಆಗಾಗ ದಾಳಿ ಮಾಡುವದಕ್ಕಿಂತ ಬಿಜೆಪಿ ಪಕ್ಷವು ಇಡಿ, ಸಿಬಿಐ ಶಾಖೆಗಳನ್ನು ಡಿ.ಕೆ. ಶಿವಕುಮಾರ ಅವರ ಮನೆ ಮತ್ತು ವ್ಯವಹಾರ ಕೇಂದ್ರಗಳಲ್ಲೇ ಶಾಖೆಗಳನ್ನು ಪ್ರಾರಂಭಿಸಿದರೆ ಸೂಕ್ತವೆಂದು ಕಾಂಗ್ರೆಸ್ ಅಭಿಪ್ರಾಯಪಟ್ಟಿದೆ.
ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ರನದೀಪ ಸಿಂಗ್ ಸುರ್ಜೆವಾಲ ಅವರು ಬೆಳಗಾವಿಯಲ್ಲಿ ಮಂಗಳವಾರ ಸುದ್ಧಿಗಾರರೊಂದಿಗೆ ಮಾತನಾಡಿ, ಇಡಿ, ಆದಾಯ ತೆರಿಗೆ, ಸಿಬಿಐ ಮುಂತಾದವು ಒಂದರ ಮೇಲೊಂದು ಡಿ.ಕೆ. ಶಿವಕುಮಾರ ಅವರ ಮೇಲೆ ದಾಳಿ ಮಾಡುತ್ತಿವೆ, ಅದಕ್ಕೆ ಬದಲು ಅವರ ಮನೆ ಮತ್ತು ವ್ಯವಹಾರ ಸ್ಥಳಗಳಲ್ಲಿ ಒಂದೊಂದು ಶಾಖೆ ಪ್ರಾರಂಭಿಸುವದು ಸೂಕ್ತವೆಂದರು.
ಶಿವಕುಮಾರ ಓರ್ವ ಕಾಂಗ್ರೆಸ್ ಮುಖಂಡ, ದೆಹಲಿಯಿಂದ ಕರ್ನಾಟಕದವರೆಗೂ ಕಾಂಗ್ರೆಸ್ ಪಕ್ಷ ಅವರೊಂದಿಗೆ ನಿಲ್ಲಲಿದೆ ಎಂದೂ ಅವರು ಹೇಳಿದರು.
ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಎಲ್ಲ ವಿಷಯಗಳಲ್ಲಿ ವಿಫಲಗೊಂಡಿದೆ. ಹಲವಾರು ಹಗರಣಗಳಲ್ಲಿ ಸಿಲುಕಿಕೊಂಡಿದೆ. ರಾಜ್ಯದ ಜನರನ್ನು ಎರಡೂ ಕೈ ಗಳಿಂದ ಲೂಟಿ ಹೊಡೆಯುವದರ ಮೂಲಕ ರಾಷ್ಟ್ರದಲ್ಲಿ ಅತ್ಯಂತ ಭ್ರಷ್ಟ ಸರಕಾರವೆಂಬ ಕುಖ್ಯಾತಿ ಹೊಂದಿದೆ. ದೇಶದ ಪ್ರತಿಯೊಬ್ಬರೂ ಕರ್ನಾಟಕವನ್ನು ಕರೆಯುವುದೇ ‘40% ಕಮಿಷನ್’ ಸರಕಾರವೆಂದು ಅವರು ಹೇಳಿದರು.
ಕರ್ನಾಟಕ ಸೇರಿದಂತೆ ದೇಶದ ಅನೇಕ ರಾಜ್ಯಗಳಲ್ಲಿ ಬಿಜೆಪಿಗೆ ಅಧಿಕಾರ ರಚಿಸಲು ಅಗತ್ಯವಾದ ಬಹುಮತವಿರಲಿಲ್ಲ, ಬೇರೆ ಪಕ್ಷಗಳ ಶಾಸಕರನ್ನು ಸಿಬಿಐ, ಇಡಿ, ಮೊಂತಾದವುಗಳಿಂದ ಹೆದರಿಸಿ, ಅಕ್ರಮವಾಗಿ ಸರಕಾರ ನಡೆಸುತ್ತಿದೆ. ಇದಕ್ಕೆಲ್ಲ ಕರ್ನಾಟಕದ ಮೂಲಕವೇ ದೇಶದ ಜನ ಪಾಠ ಕಲಿಸಲಿದ್ದಾರೆ ಎಂದು ಸುರ್ಜೆವಾಲ್ ಹೇಳಿದರು.