ಕಲಬುರಗಿ : ಒಂದೇ ವರ್ಷದಲ್ಲಿ 8000 ಶಾಲಾ ಕೊಠಡಿ ನಿರ್ಮಾಣ ಹಾಗೂ 4000 ಹೊಸ ಅಂಗನವಾಡಿಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕಲಬುರಗಿ ತಾಲೂಕಿನ ಮಡಿಹಾಳ ತಾಂಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಿವೇಕ ಶಾಲಾ ಕೊಠಡಿಗಳ ಯೋಜನೆಯ ಶಂಕುಪನೆ ಸ್ಥಾಪನೆ ನೆರವೇರಿಸಿ ಮಾತನಾಡಿದರು.ಈ ವರ್ಷ ರಾಜ್ಯದಲ್ಲಿ 4000 ಹೊಸ ಅಂಗನವಾಡಿಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ.
ತಲಾ 15 ಲಕ್ಷ ರೂ.ನಂತೆ ಅನುದಾನ ನೀಡಲಾಗಿದ್ದು, ಈ ಯೋಜನೆಯಲ್ಲಿ 1500 ಅಂಗನವಾಡಿಗಳನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದರು.
ಒಟ್ಟು 8000 ಸಾವಿರ ಶಾಲಾ ಕೊಠಡಿಗಳನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ನಿರ್ಮಾಣ ವಾಗಲಿದ್ದು, ಸುಮಾರು ಆರು ಸಾವಿರ ಕೊಠಡಿಗಳನ್ನು ಕರ್ನಾಟಕದಲ್ಲಿ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಈ ಕಾರ್ಯವನ್ನು ಮೂರು ವರ್ಷ ನಿರಂತರವಾಗಿ ಮಾಡಿದರೆ, ಕರ್ನಾಟಕದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲಾ ಕೊಠಡಿಗಳ ಮೂಲಸೌಕರ್ಯದ ಕೊರತೆ ನೀಗಲಿದೆ. ಅದರ ಜೊತೆಗೆ ಮುಂದಿನ ಆಗಸ್ಟ್ 15 ರೊಳಗೆ ಎಲ್ಲಾ ಸರ್ಕಾರಿ ಶಾಲೆಗಳ ಶೌಚಾಲಯ ಗಳ ನಿರ್ಮಾಣ ಮತ್ತು ದುರಸ್ತಿ ಕಾರ್ಯಕ್ಕಾಗಿ 250 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದರು.