ಬೆಳಗಾವಿ , ೩೦ : ಡಿಸೆಂಬರ 4 ರಿಂದ 15 ರವರೆಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವಿಧಾನ ಮಂಡಳದ ಚಳಿಗಾಲದ ಅಧಿವೇಶನ ನಡೆಯಲಿದ್ದು ಭದ್ರತೆಗಾಗಿ 5 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಇಷ್ಟೊಂದು ಸಂಖ್ಯೆಯ ಪೊಲೀಸರ ವಾಸ್ತವ್ಯಕ್ಕೆ ವಿಧಾನಸೌಧದ ಬಳಿಯ ಅಲಾರವಾಡ ಗ್ರಾಮದ ಬಳಿ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ನಾಲ್ಕು ದೊಡ್ಡ ಜರ್ಮನ್ ಟೆಂಟ್ ಗಳನ್ನೊಳಗೊಂಡ ತಾತ್ಕಾಲಿಕ ಬೃಹತ್ ಟೌನ್ ಶಿಪ್ ನಿರ್ಮಿಸಲಾಗಿದೆ.
ಈ ಟೌನ್ ಶಿಪ್ ನಿರ್ಮಾಣ ಕೆಲಸವನ್ನು ಮೈಸೂರಿನ ಕೆ.ಎಂ ಶರೀಫ ಎನ್ನುವವರು ತೆಗೆದುಕೊಂಡಿದ್ದು, ಹದಿಮೂರು ದಿನಗಳಿಂದ 100 ಜನ ಕಾರ್ಮಿಕರು ಟೆಂಟ್ ಗಳ ನಿರ್ಮಾಣದಲ್ಲಿ ತೊಡಗಿದ್ದಾರೆ. ಇದೀಗ ಬಹುತೇಕ ಕೆಲಸ ಮುಗಿದಿದ್ದು, ಕೊನೆಯ ಹಂತದ ಕೆಲಸಗಳನ್ನು ಮಾಡುತ್ತಿದ್ದಾರೆ.
ನಾಲ್ಕು ದೊಡ್ಡ ಜರ್ಮನ್ ಟೆಂಟ್ ಹಾಗು ಒಂದು ಚಿಕ್ಕ ಟೆಂಟ್ ಹಾಕಿ ಟೌನ್ ಶಿಪ್ ನಿರ್ಮಾಣ ಮಾಡಲಾಗಿದ್ದು, ಒಂದೊಂದು ಜರ್ಮನ್ ಟೆಂಟ್ 100 ಅಡಿ ಅಗಲ, 200ಅಡಿ ಉದ್ದ ಇರಲಿದೆ. ಇದೇ ಮಾದರಿಯ ಒಟ್ಟು ನಾಲ್ಕು ಜರ್ಮನ್ ಟೆಂಟ್ ನಿರ್ಮಾಣ ಮಾಡಲಾಗಿದೆ. ಅಧಿಕಾರಿಗಳಿಗೆ ಸಣ್ಣ-ಸಣ್ಣ ಟೆಂಟ್ ಸಹ ನಿರ್ಮಿಸಲಾಗಿದೆ. ಇನ್ನು ಒಂದೊಂದು ಟೌನ್ ಶಿಪ್ ನಲ್ಲಿ 500 ಸಿಬ್ಬಂದಿಗೆ ತಂಗಲು ವ್ಯವಸ್ಥೆ ಮಾಡಲಾಗಿದೆ.
ವಾಟರ್ ಪ್ರೂಫ್ ಟೆಂಟ್ ಇದಾಗಿದ್ದು, ಒಟ್ಟು 2000 ಜನ ಪೊಲೀಸ್ ಸಿಬ್ಬಂದಿಗಳಿಗೆ ಇಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಕ್ವಾಟ್, ಗಾದಿ, ತಲೆ ದಿಂಬು, ಬೆಡ್ ಶೀಟಗಳನ್ನು ನೀಡಲಾಗುತ್ತದೆ. ಹಾಗೇ ಚಾರ್ಜಿಂಗ್ ವ್ಯವಸ್ಥೆ ಕೂಡ ಇದೆ ಎಂದು ಬೆಳಗಾವಿ ಪೊಲೀಸ್ ಆಯುಕ್ತ ಎಸ್ ಎನ್ ಸಿದ್ದರಾಮಪ್ಪ ತಿಳಿಸಿದ್ದಾರೆ.