ಬೆಳಗಾವಿ, ೧೧: ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರರೊಬ್ಬರು ಪಿಡಬ್ಲ್ಯೂಡಿ ಕಚೇರಿ ಮುಂದೆಯೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರ ನಾಗಪ್ಪ ಬಂಗಿ ಎಂಬವರು ತಾವು ಮಾಡಿದ ಕಾಮಗಾರಿಯ ಬಿಲ್ ನೀಡಲು ಇಲಾಖೆ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಕೋಟೆ (ಕಿಲ್ಲಾ) ಪ್ರದೇಶದಲ್ಲಿರುವ ಕಚೇರಿಯ ಮುಂದೆ ತಮ್ಮ ಪತ್ನಿ ಮಕ್ಕಳೊಂದಿಗೆ ಧರಣಿ ಕುಳಿತಿದ್ದರು. ಮಧ್ಯಾಹ್ನದ ಹೊತ್ತಿಗೆ ಗುತ್ತಿಗೆದಾರರು ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದ ಕೃಷಿಗೆ ಬಳಸುವ ಕೀಟನಾಶಕವನ್ನು ಕುಡಿದು ಅಸ್ವಸ್ಥರಾದರು. ಹತ್ತಿರದಲ್ಲೇ ಇದ್ದ ಪೊಲೀಸರು ಅವರ ಬಳಿಯಲ್ಲಿದ್ದ ಬಾಟಲಿಯನ್ನು ಕಸಿದುಕೊಂಡು ತಕ್ಷಣ ಅವರನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಿದರು. ಈಗ ಅವರು ಅಪಾಯದಿಂದ ಪಾರಾಗಿದ್ದಾರೆ.
2022 ರಲ್ಲಿ ಬಿಜೆಪಿ ಸರ್ಕಾರ ಇದ್ದ ಸಮಯದಲ್ಲಿ ಬಂಗಿ ಅವರು ಬೆಳಗಾವಿಯ ಸುವರ್ಣ ವಿಧಾನಸೌಧ ಬಳಿಯಿರುವ ಹಲಗಾ ಗ್ರಾಮದಿಂದ ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದ ವರೆಗೆ ಸುಮಾರು 50 ಕಿ.ಮೀ. ರಸ್ತೆಯ ಕಾಮಗಿರಿ ಗುತ್ತಿಗೆ ಪಡೆದು ಅದೇ ವರ್ಷ ಪೂರೈಸಿದ್ದರು ಎಂದು ಹೇಳಿದ್ದಾರೆ. ಅದರ ಒಟ್ಟು ಮೊತ್ತ 6.5 ಲಕ್ಷ ರೂಪಾಯಿ. ಈ ಹಣ ಕೊಡಲು ಇಲಾಖೆಯು ಆವಾಗಿನಿಂದ ವಿವಿಧ ಕಾರಣಗಳನ್ನು ನೀಡುತ್ತ ವಿಳಂಬ ಮಾಡುತ್ತಿದ್ದರಿಂದ ಬೇಸತ್ತ ಅವರು ಕುಟುಂಬ ಸಮೇತ ಧರಣಿ ಮಾಡಲು ನಿರ್ಧರಿಸಿದ್ದರು ಎಂದು ದೂರಲಾಗಿದೆ.
ನಿರ್ವಹಣೆ ಬಿಲ್ ಮಂಜೂರು ಮಾಡದ ಹಿನ್ನೆಲೆ ಗುತ್ತಿಗೆದಾರ ನಾಗಪ್ಪ ಬಂಗಿ ಆತ್ಮಹತ್ಯೆಗೆ ಯತ್ನಿಸಿದ್ದು ಅವರನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇಂದು ವಿಷದ ಬಾಟಲಿ ಜೊತೆಗೆ ಲೋಕೋಪಯೋಗಿ ಇಲಾಖೆ ಕಚೇರಿ ಬಳಿ ಬಂದಿದ್ದ ನಾಗಪ್ಪ ಬಂಗಿ ಅವರು ಬೇಜವಾಬ್ದಾರಿ ತೋರಿದ ಅಧಿಕಾರಿಗಳು ಬರದಿದ್ದರೆ ವಿಷ ಕುಡಿಯುವುದಾಗಿ ಎಚ್ಚರಿಕೆ ನೀಡಿ, ಕುಟುಂಬ ಸಮೇತ ಆಗಮಿಸಿ ಕಚೇರಿ ಮುಂದೆ ಧರಣಿ ಕುಳಿತಿದ್ದರು. ಈ ಬಗ್ಗೆ ಅಧಿಕಾರಿಗಳಿಂದ ಸ್ಪಂದನೆ ಸಿಗದ ಕಾರಣ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.
“ನಾನು 2022ರಲ್ಲಿ ಹಲಗಾ ಗ್ರಾಮದಿಂದ ತಿಗಡಿ ಗ್ರಾಮದ ವರೆಗೆ ರಸ್ತೆ ಮಾಡಿದ್ದು ನಿರ್ಮಿಸಿದ್ದ ರಸ್ತೆ ನಿರ್ವಹಣೆಗೆ ಇಲಾಖೆಯು ವರ್ಕ ಆರ್ಡರ್ ಕೊಟ್ಟಿತ್ತು. 6 ಲಕ್ಷ 50 ಸಾವಿರ ವೆಚ್ಚದಲ್ಲಿ ಈಗಾಗಲೇ ಕಾಮಗಾರಿ ಮುಗಿಸಿದ್ದು ಕಾಮಗಾರಿ ಮುಗಿದರೂ ಬಿಲ್ ನೀಡದೇ ಅಧಿಕಾರಿಗಳು ಸತಾಯಿಸುತ್ತಿರುವ ಹಿನ್ನೆಲೆ ಎಇಇ ರಮೇಶ ಹೆಗಡೆ ಮತ್ತು ಎಇಇ ಬಸವರಾಜ ಹಲಗಿ ವಿರುದ್ಧ ಆಕ್ರೋಶಗೊಂಡು ವಿಷ ಸೇವಿಸಿದೆ. ಶೀಘ್ರ ಬಿಲ್ ಮಂಜೂರು ಮಾಡದಿದ್ದರೆ ಕುಟುಂಬ ಸಮೇತ ಕಚೇರಿ ಎದುರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಗುತ್ತಿಗೆದಾರ ಬಂಗಿ ತಿಳಿಸಿದ್ದಾರೆ.
ಬೆಳಗಾವಿ ಲೋಕೋಪಯೋಗಿ ಇಲಾಖೆಯ ಮುಖ್ಯ ಕಾರ್ಯಕಾರಿ ಅಭಿಯಂತರ ಎಸ್ ಎಸ್ ಸಬರದ ಅವರು ಈ ಕುರಿತು ಸಮದರ್ಶಿಗೆ ಮಾಹಿತಿ ನೀಡಿದ್ದು “ಗುತ್ತಿಗೆದಾರ ನಾಗಪ್ಪ ಬಂಗಿ ಅವರು ತಾವು ಪಡೆದ ಗುತ್ತಿಗೆ ಕೆಲಸವನ್ನು ಪೂರ್ಣಗೊಳಿಸಿಲ್ಲ. ಅಪೂರ್ಣ ಕೆಲಸಕ್ಕೆ ಸಂಪೂರ್ಣ ಕೆಲಸ ಮಾಡಿರುವ ಬಗ್ಗೆ ಬಿಲ್ ನೀಡಿದ್ದಾರೆ. ಅಪೂರ್ಣ ಕೆಲಸಕ್ಕೆ ಬಿಲ್ ಹೇಗೆ ನೀಡುವುದು. ಅದಕ್ಕಾಗಿ ಅವರು ಪ್ರತಿಭಟನೆ ಮಾಡಿದ್ದಾರೆ. ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ” ಎಂದು ತಿಳಿಸಿದರು.
ತಮ್ಮ ಕಚೇರಿ ಆವರಣದಲ್ಲಿ ಅನುಮತಿಯಿಲ್ಲದೇ ಪ್ರತಿಭಟನೆ ಮಾಡಿದ ಮತ್ತು ಸುಳ್ಳು ಆರೋಪ ಹೊರಿಸಿ ಆತ್ಮಹತ್ಯೆಗೆ ಯತ್ನಿಸಿದ ಕುರಿತು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ ಎಂದು ಅವರು ಹೇಳಿದರು.
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸತೀಶ ಜಾರಕಿಹೊಳಿ ಅವರು ಲೋಕೋಪಯೋಗಿ ಸಚಿವರೂ ಆಗಿದ್ದಾರೆ.