ಹೈದರಾಬಾದ: ಹದಗೆಟ್ಟಿರುವ ಭಾರತದ ಪ್ರಸ್ತುತ ಪರಿಸ್ಥಿತಿಯನ್ನು ಸುಧಾರಿಸುವ ಜವಾಬ್ದಾರಿಯನ್ನು ವಿದ್ಯಾರ್ಥಿಗಳು ಹೊರಬೇಕು ಎಂದು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಹೇಳಿದ್ದಾರೆ. ದೇಶದ ಹೊಸ ವಾಸ್ತವವನ್ನು ಸೃಷ್ಟಿಸುವುದು ನಿಮ್ಮ ಹೊಣೆಗಾರಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.
ಭಾರತದ ವಾಸ್ತವದ ಸಂಗತಿ ಏನೆಂದರೆ ಭ್ರಷ್ಟಾಚಾರ, ಕೊಳಕು ರಸ್ತೆಗಳು ಮತ್ತು ಮಾಲಿನ್ಯ ಸೇರಿದಂತೆ ಇನ್ನಿತರ ವಿಚಾರಗಳು ಆಗಿವೆ. ಸಿಂಗಾಪುರ ಎಂದರೆ ಸ್ವಚ್ಛ ರಸ್ತೆಗಳು ಮತ್ತು ಮಾಲಿನ್ಯ ರಹಿತವಾಗಿರುವ ಪರಿಸರ ಎಂಬುದಾಗಿದೆ ಎಂದು ನಾರಾಯಣ ಮೂರ್ತಿ ಹೇಳಿದರು.
ಅವರು ವಿಜಯನಗರಂ ಜಿಲ್ಲೆಯ ರಾಜಮನಲ್ಲಿರುವ ಜಿಎಂಆರ್ ಇನಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಜಿಎಂಆರ್ ಐಟಿ)ಯ ರಜತ ಮಹೋತ್ಸವ ವರ್ಷಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಭಾರತದ ನೂತನ ವಾಸ್ತವವನ್ನು ಸೃಷ್ಟಿಸುವ ಹೊಣೆಗಾರಿಕೆ ವಿದ್ಯಾರ್ಥಿಗಳ ಮೇಲಿದೆ ಎಂದರು.
ದೇಶದ ಈ ನ್ಯೂನತೆಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಈ ಅವಕಾಶವನ್ನು ಬಳಸಿಕೊಂಡು, ಬದಲಾವಣೆ ಪರ್ವದತ್ತ ಹೆಜ್ಜೆ ಹಾಕಬೇಕಾಗಿದೆ. ನೀವೇ ನಾಯಕ ಎಂದು ಕಲ್ಪಿಸಿಕೊಳ್ಳಿ, ಜವಾಬ್ದಾರಿ ಹೊರಲು ಇನ್ನೊಬ್ಬರಿಗಾಗಿ ಕಾಯಬೇಡಿ. ನೀವು ಏನು ಮಾಡುತ್ತೀರಿ ಎಂಬುದೇ ವಾಸ್ತವವಾಗಿದೆ ಎಂದು ನಾರಾಯಣ ಮೂರ್ತಿ ಸಲಹೆ ನೀಡಿರುವುದಾಗಿ ವರದಿ ತಿಳಿಸಿದೆ.
ಸಮಾಜದಲ್ಲಿ ಬದಲಾವಣೆ ತರಬೇಕು ಎಂಬ ಮನೋಭಾವ ಯುವಪೀಳಿಗೆಯಲ್ಲಿ ಮೂಡಬೇಕಾಗಿದೆ. ನಮ್ಮ ವೈಯಕ್ತಿಕ ಹಿತಾಸಕ್ತಿಗಿಂತ ದೇಶ ಮತ್ತು ಸಮಾಜ ಮೊದಲು ಎಂಬ ಭಾವನೆ ಬೆಳೆಸಿಕೊಳ್ಳಬೇಕು ಎಂದು ನಾರಾಯಣಮೂರ್ತಿ ಸಲಹೆ ನೀಡಿದ್ದಾರೆ.