ಬೆಳಗಾವಿ : ಮದ್ಯ ತಯಾರಿಕೆಗೆ ಬೇಕಾದ ಕೆಮಿಕಲ್ ಬಳಸಿ ಹೆಚ್ಚು ಮಾರಾಟವಾಗುವ ವಿವಿಧ ಹೆಸರಾಂತ ಬ್ರ್ಯಾಂಡಗಳ ನಕಲಿ ಮದ್ಯವನ್ನು ತಯಾರಿಸಿ ಮದ್ಯದಂಗಡಿ ಮತ್ತು ಬಾರ್ ಗಳಿಗೆ ಅಕ್ರಮವಾಗಿ ಪೂರೈಸುತ್ತಿದ್ದ ಇಬ್ಬರನ್ನು ಬೆಳಗಾವಿಯ ಸಿಟಿ ಕ್ರೈಮ್ ಇನ್ವೆಸ್ಟಿಗೇಷನ್ ಬ್ರ್ಯಾಂಚ್ ಪೊಲೀಸರು ಬಂಧಿಸಿ, ಅವರು ತಯಾರಿಸಿಟ್ಟ ಅಂದಾಜು 4 ಲಕ್ಷ ಮೌಲ್ಯದ ನಕಲಿ ಮದ್ಯ ವಶಕ್ಕೆ ಪಡೆದಿದ್ದಾರೆ.
ಬೆಳಗಾವಿ ಉಜ್ವಲ್ ನಗರದ 22 ವರುಷದ ಹಸನ್ ಜಾವೀದ ಬೇಪಾರಿ ಮತ್ತು 42 ವರುಷದ ಹಿಂಡಲಗಾ ವಿಜಯನಗರದ ರಾಕೇಶ ಕೇಶವ ನಾಯಕ ಎಂಬವರು ಸದಾಶಿವ ನಗರದ ವಿರುಪಾಕ್ಷಿ ಅಪಾರ್ಟಮೆಂಟಿನ ಒಂದು ಬ್ಲಾಕ್ ನಲ್ಲಿ ನಕಲಿ ಮದ್ಯ ತಯಾರಿಸಿ, ಅವುಗಳಿಗೆ ಹೆಸರಾಂತ ಬ್ರ್ಯಾಂಡಗಳ ಲೇಬಲ್ ಮತ್ತು ಅಬಕಾರಿ ಇಲಾಖೆಯ ನಂಬರ್ ನ ಸ್ಟಿಕರ್ ಕೂಡ ಅಂಟಿಸಿ ಅನೇಕ ಮದ್ಯದಂಗಡಿ, ಬಾರ್, ಧಾಬಾಗಳಿಗೆ ಪೂರೈಸುತ್ತಿದ್ದರು. ಅವರೂ ಸಹ ಅಕ್ರಮವಾಗಿ ಅವುಗಳನ್ನು ಗ್ರಾಹಕರಿಗೆ ಪೂರೈಸುತ್ತಿದ್ದರು.
ನಕಲಿ ಮದ್ಯ ತಯಾರಿಸಿ ಪೂರೈಸುತ್ತಿದ್ದವರು ಬಳಸುತ್ತಿದ್ದ ಕಾರೊಂದನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆದರೆ, ಬಂಧಿತರು ಯಾವ ಮದ್ಯದಂಗಡಿ, ಬಾರ್, ಧಾಬಾಗಳಿಗೆ ಎಷ್ಟು ಮತ್ತು ಯಾವಾಗಿನಿಂದ ನಕಲಿ ಮದ್ಯ ಪೂರೈಸುತ್ತಿದ್ದರು ಮತ್ತು ಇವರ ಹಿಂದೆ ಯಾವ ಕಾಣದ ಕೈಗಳಿವೆ ಎಂಬುದರ ಬಗ್ಗೆ ಪೊಲೀಸ ತನಿಖೆ ನಂತರ ಹೊರಬರಬೇಕಿದೆ.