ಬೆಂಗಳೂರು: ಚಾಮರಾಜಪೇಟೆ ಮೈದಾನ ಮಾಲೀಕತ್ವಕ್ಕೆ ಸಂಬಂಧಿಸಿ ಆದೇಶದ ವಿರುದ್ಧ ವಕ್ಫ ಬೋರ್ಡ ಹೈಕೋರ್ಟ ಮೆಟ್ಟಿಲೇರಿತ್ತು. ಈ ಸಂಬಂಧ ವಿಚಾರಣೆ ನಡೆಸಿದ ಹೈಕೋರ್ಟ, ಈದ್ಗಾ ಮೈದಾನದಲ್ಲಿ ಯಥಾಸ್ಥಿತಿ ಕಾಪಾಡುವಂತೆ ಗುರುವಾರ ಆದೇಶ ಹೊರಡಿಸಿದೆ.
ಈ ಹಿನ್ನೆಲೆಯಲ್ಲಿ ಗಣೇಶ ಪ್ರತಿಷ್ಠಾಪಿಸಲು ಆವಕಾಶವಿಲ್ಲ. ಬಕ್ರೀದ್ ಹಾಗೂ ರಂಜಾನ್ ಪ್ರಾರ್ಥನೆಗೆ ಯಥಾಪ್ರಕಾರ ಅವಕಾಶವಿದೆ.
ಚಾಮರಾಜಪೇಟೆ ಈದ್ಗಾ ಜಾಗವನ್ನು ಆಟದ ಮೈದಾನವಾಗಿಯೂ ಬಳಕೆ ಮಾಡಲು ಮತ್ತು ಮೊದಲು ಇದ್ದಂತೆ ಯಥಾಸ್ಥಿತಿ ಕಾಯಲು ನ್ಯಾಯಮೂರ್ತಿ ಹೇಮಂತ ಚಂದನ ಗೌಡರ ಅವರಿದ್ದ ಪೀಠ ಆದೇಶ ಹೊರಡಿಸಿ ವಿಚಾರಣೆಯನ್ನು ಸೆಪ್ಟೆಂಬರ್ 23ಕ್ಕೆ ಮುಂದೂಡಿದೆ.
ಚಾಮರಾಜಪೇಟೆ ಮೈದಾನದಲ್ಲಿ 11 ದಿನ ಗಣೇಶೋತ್ಸವಕ್ಕೆ ಕಂದಾಯ ಇಲಾಖೆ ಅನುಮತಿ ನೀಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳು ಉತ್ಸವ ಆಚರಣೆಗೆ ಪೂರ್ವ ಸಿದ್ಧತೆ ಆರಂಭಗೊಂಡಿದ್ದವು. ಇದಕ್ಕೆ ಈಗ ಹೈಕೋರ್ಟ ಈ ಆದೇಶದಿಂದ ತಡೆ ಬಿದ್ದಿದೆ.
ಮೈದಾನದ ಮಾಲೀಕತ್ವ ಪ್ರಶ್ನೆ ಉದ್ಭವ ಆಗುವುದಿಲ್ಲ. ಹಿಂದೆಯೇ ಗೆಜೆಟ್ ನೋಟೀಫಿಕೇಶನ್ ಆಗಿದೆ. ಸುಪ್ರೀಮ ಕೋರ್ಟ ಆದೇಶ ಕೂಡಾ ಇದೆ. ಮಕ್ಕಳು ಆಟ ಆಡಲು ಅನುಮತಿ ಇದೆ. ಅಲ್ಲದೇ ವರ್ಷಕ್ಕೆ ಎರಡು ಬಾರಿ ನಮಾಜಗೆ ಅನುಮತಿ ಇದೆ ಎಂದು ವಕ್ಫ ಬೋರ್ಡ ಪರ ವಕೀಲರು ಹೇಳಿದ್ದಾರೆ.
ಕೋರ್ಟ ಆದೇಶದ ಬಗ್ಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಶ್ರೀನಿವಾಸ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ವಿಚಾರದಲ್ಲಿ ಹೈಕೋರ್ಟ ಆದೇಶದಂತೆ ಯಥಾಸ್ಥಿತಿ ಕಾಪಾಡುತ್ತೇವೆ. ಗಣೇಶೋತ್ಸವ ಸಂಬಂಧ 7 ಸಂಘಟನೆಗಳು ಅರ್ಜಿ ಸಲ್ಲಿಸಿದ್ದವು. ಗಣೇಶೋತ್ಸವ ಬೇಡ ಎಂದು 2 ಸಂಘಟನೆ ಅರ್ಜಿ ಸಲ್ಲಿಸಿವೆ. ಹೈಕೋರ್ಟ ಆದೇಶ ಸಂಬಂಧ ಸರ್ಕಾರದ ಜತೆ ಚರ್ಚಿಸಿ ಹೈಕೋರ್ಟ ಆದೇಶ ಪಾಲಿಸುತ್ತೇವೆ ಎಂದು ತಿಳಿಸಿದ್ದಾರೆ.