ಜಂಟಿ ಸಮೀಕ್ಷೆ ನಂತರ ಬೆಳೆಹಾನಿ ಪರಿಹಾರ : ಸಚಿವ ಬಿ.ಸಿ. ಪಾಟೀಲ 

A B Dharwadkar
ಜಂಟಿ ಸಮೀಕ್ಷೆ ನಂತರ ಬೆಳೆಹಾನಿ ಪರಿಹಾರ : ಸಚಿವ ಬಿ.ಸಿ. ಪಾಟೀಲ 
Latest news isolated icon, megaphone or bullhorn, breaking report vector. Info announcement and TV or radio broadcast, web article, loudspeaker. Daily headline emblem or logo, message or advertising

ಬೆಳಗಾವಿ : ಇತ್ತೀಚಿನ ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿರುವ ಕುರಿತು ಜಂಟಿ ಸಮೀಕ್ಷೆ ಪೂರ್ಣಗೊಂಡ ತಕ್ಷಣವೇ ಪರಿಹಾರ ಪೋರ್ಟಲ್ ನಲ್ಲಿ ಅಪ್ ಲೋಡ್ ಮಾಡಿ ಪರಿಹಾರವನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಕೃಷಿ ಇಲಾಖೆ ಸಚಿವ ಬಿ.ಸಿ.ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸುವರ್ಣ ವಿಧಾನಸೌಧದಲ್ಲಿ ಶನಿವಾರ(ಸೆ.3) ನಡೆದ ಕೃಷಿ ಇಲಾಖೆಯ ಬೆಳಗಾವಿ ವಿಭಾಗೀಯ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಿಬ್ಬಂದಿ ಕೊರತೆ ಮತ್ತಿತರ ನೆಪ ಹೇಳಿ ಬೆಳೆಹಾನಿ ಪರಿಹಾರ ನೀಡುವ ಪ್ರಕ್ರಿಯೆಯನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ಈಗಾಗಲೇ ನಿರ್ದೇಶನ ನೀಡಿರುವಂತೆ ಎಲ್ಲ ಜಿಲ್ಲೆಗಳಲ್ಲಿ ಹೆಸರು, ಉದ್ದು ಖರೀದಿ ಕೇಂದ್ರಗಳನ್ನು ಆರಂಭಿಸಿ ರೈತರ ನೋಂದಣ ಜತೆ ಖರೀದಿ ಪ್ರಕ್ರಿಯೆ ಆರಂಭಿಸಬೇಕು ಎಂದು ತಿಳಿಸಿದರು.

ರೈತರ ಮೂಲಕ ಬೆಳೆ ಸಮೀಕ್ಷೆಗೆ ನಡೆಸಲು ಸೂಚನೆ:

ಇಲಾಖೆ ಅಭಿವೃದ್ಧಿಪಡಿಸಿರುವ ಆಪ್ ಮೂಲಕ ರೈತರೇ ಸ್ವತಃ ಬೆಳೆಸಮೀಕ್ಷೆ ಮಾಡಲು ಪೆÇ್ರೀತ್ಸಾಹ ನೀಡಬೇಕು. ಇದಕ್ಕಾಗಿ ಸೂಕ್ತ ಪ್ರಚಾರ ಕಾರ್ಯ ಕೈಗೊಳ್ಳಬೇಕು ಎಂದು ಸಚಿವ ಪಾಟೀಲ ತಿಳಿಸಿದರು.

ಬೆಳೆವಿಮೆ ಪರಿಹಾರ ಕ್ಲೇಮು ಪ್ರಕರಣಗಳನ್ನು ಇತ್ಯರ್ಥಪಡಿಸಬೇಕು. ವಿಮೆ ಕಂಪನಿಯ ಜತೆ ನಿರಂತರ ಸಂಪರ್ಕ ಇಟ್ಟುಕೊಳ್ಳಬೇಕು. ರೈತರ ಆಧಾರ ನೋಂದಣ ಸೇರಿದಂತೆ ಎಲ್ಲ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ಪರಿಹಾರವನ್ನು ಒದಗಿಸಬೇಕು. ಬೆಳೆಹಾನಿ ಸಂಭವಿಸಿದ ಪ್ರದೇಶಗಳಲ್ಲಿ ಪ್ರತಿ ರೈತನಿಗೂ ಸೂಕ್ತ ಪರಿಹಾರ ದೊರಕಿಸಲು ಅಧಿಕಾರಿಗಳು ಶ್ರಮಿಸಬೇಕು ಎಂದು ತಿಳಿಸಿದರು.

ಪಿಎಂ-ಕಿಸಾನ್ ಯೋಜನೆಯಡಿ ರೈತರ ಇ-ಕೆವೈಸಿ ಜೋಡಣೆಗೆ ಎಲ್ಲ ಅಧಿಕಾರಿಗಳು ಪ್ರಯತ್ನಿಸಬೇಕು. ಸೆ.7 ಕೊನೆಯ ದಿನವಾಗಿರುವುದರಿಂದ ಬಾಕಿ ಉಳಿದ ರೈತರ ಇ-ಕೆವೈಸಿ ಮಾಡಬೇಕು ಎಂದು ತಿಳಿಸಿದರು.

ಇ-ಕೆವೈಸಿ ಜೋಡಣೆಯಲ್ಲಿ ಬೆಳಗಾವಿ ಜಿಲ್ಲೆ ಅತ್ಯುತ್ತಮ ಸಾಧನೆ ಮಾಡಿದೆ. ಇದನ್ನೇ ಮಾದರಿಯಾಗಿಟ್ಟುಕೊಂಡು ಉಳಿದ ಜಿಲ್ಲೆಯವರು ಕೆವೈಸಿ ಮಾಡಿಸಬೇಕು.

ಇದಕ್ಕೆ ಸಂಬಂಧಿಸಿದಂತೆ ಹೆಚ್ಚು ಹೆಚ್ಚು ಪ್ರಚಾರ ಕೈಗೊಳ್ಳಬೇಕು ಎಂದು ತಿಳಿಸಿದರು.

ನಿರೀಕ್ಷಿತ ಪ್ರಗತಿ ಸಾಧಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಬಿ.ಸಿ.ಪಾಟೀಲ ಎಚ್ಚರಿಕೆ ನೀಡಿದರು.

 

ರಸಗೊಬ್ಬರ ಸಮರ್ಪಕ ವಿತರಣೆಗೆ ನಿರ್ದೇಶನ:

ರಸಗೊಬ್ಬರ ದಾಸ್ತಾನು ಇರುವುದರಿಂದ ನಿಗದಿತ ಅವಧಿಯಲ್ಲಿ ಪಿ.ಓ.ಎಸ್. ಮೂಲಕ ರೈತರಿಗೆ ವಿತರಣೆ ಮಾಡಬೇಕು. ರಸಗೊಬ್ಬರ ಸಮರ್ಪಕವಾಗಿ ಸರಬರಾಜು ಮಾಡದ ಪಿ.ಓ.ಎಸ್. ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ರಸಗೊಬ್ಬರ ಗುಣ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಆಯಾ ಜಿಲ್ಲೆಗಳಿಗೆ ನೀಡಲಾಗಿರುವ ವಾರ್ಷಿಕ ಗುರಿಯ ಪ್ರಕಾರ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳಿಸಬೇಕು. ಒಂದು ವೇಳೆ ಕಳಪೆ ಮಾದರಿ ಕಂಡುಬಂದಲ್ಲಿ ನಿಯಮಾವಳಿ ಪ್ರಕಾರ ಪ್ರಕರಣವನ್ನು ದಾಖಲಿಸಬೇಕು. ರಸಗೊಬ್ಬರ ಗುಣ ನಿಯಂತ್ರಣ, ಬೆಳೆಹಾನಿ ಸಮೀಕ್ಷೆ, ಪರಿಹಾರ ವಿತರಣೆ ಸೇರಿದಂತೆ ಬಹುತೇಕ ಕೆಲಸಗಳಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸದ ಜಿಲ್ಲೆಯ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಹಿರಿಯ ಅಧಿಕಾರಿಗಳಿಗೆ ತಿಳಿಸಿದರು.

 

ಅನೇಕ ಜಿಲ್ಲೆಗಳಲ್ಲಿನ ಬೆಳೆಹಾನಿ ವಿವರವನ್ನು ಈಗಾಗಲೇ ಪೊರ್ಟಲ್ ನಲ್ಲಿ ಅಪ್ ಲೋಡ್ ಮಾಡಲಾಗಿರುವುದರಿಂದ ಪರಿಹಾರ ಅನುಮೋದನೆ ನೀಡುವ ಪ್ರಕ್ರಿಯೆಗೆ ಮುಖ್ಯಮಂತ್ರಿಗಳಿಂದ ಶೀಘ್ರದಲ್ಲೇ ಚಾಲನೆ ಕೊಡಿಸಲಾಗುವುದು ಎಂದು ಕೃಷಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಿವಯೋಗಿ ಕಳಸದ ಅವರು ತಿಳಿಸಿದರು.

ಬೆಳೆಹಾನಿ ಜಂಟಿ ಸಮೀಕ್ಷೆಗೆ ಆದ್ಯತೆ ನೀಡಬೇಕು. ನಾಲ್ಕೈದು ದಿನಗಳಲ್ಲಿ ಸಮೀಕ್ಷೆ ಪೂರ್ಣಗೊಳಿಸಿ ಆದಷ್ಟು ಬೇಗ ರೈತರಿಗೆ ಪರಿಹಾರ ತಲುಪಿಸಬೇಕು. ಎಸ್.ಡಿ.ಆರ್.ಎಫ್. ಪ್ರಕಾರ ಪರಿಹಾರವನ್ನು ದ್ವಿಗುಣಗೊಳಿಸಲಾಗಿದೆ. ಆ ಪ್ರಕಾರವೇ ಡಾಟಾ ಅಪ್ ಲೋಡ್ ಮಾಡಬೇಕು. ಕಂದಾಯ, ಕೃಷಿ, ತೋಟಗಾರಿಕೆ ಸೇರಿದಂತೆ ಎಲ್ಲ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಶಿವಯೋಗಿ ಕಳಸದ ಅವರು ಹೇಳಿದರು.

ಕೃಷಿ ಇಲಾಖೆಯ ನಿರ್ದೇಶಕರಾದ ನಂದಿನಿಕುಮಾರಿ ಅವರು ಮಾತನಾಡಿ “ರಾಜ್ಯದಾದ್ಯಂತ ವಾಡಿಕೆ ಮಳೆಗಿಂತ ಅಧಿಕ ಮಳೆಯಾಗಿದೆ. ನಿಗದಿತ ಕೃಷಿ ಕ್ಷೇತ್ರದಲ್ಲಿ ಶೇ.90 ರಷ್ಟು ಬಿತ್ತನೆಯಾಗಿದೆ” ಎಂದು ವಿವರಿಸಿದರು.

2022-23 ಮುಂಗಾರು ಹಂಗಾಮಿನಲ್ಲಿ ಉತ್ತಮ ಬಿತ್ತನೆಯಾಗಿತ್ತು. ಇತ್ತೀಚಿನ ಅತಿವೃಷ್ಟಿಯಿಂದ ರಾಜ್ಯದಲ್ಲಿ ಒಟ್ಟಾರೆ 5 ಲಕ್ಷಕ್ಕೂ ಅಧಿಕ ಹೆಕ್ಟೇರ್ ಬೆಳೆಹಾನಿಯಾಗಿದೆ. ಬೆಳಗಾವಿ ವಿಭಾಗದ ಜಿಲ್ಲೆಗಳಲ್ಲಿ ಜಂಟಿ ಸಮೀಕ್ಷೆ ಬಹುತೇಕ ಪೂರ್ಣಗೊಂಡಿದೆ ಎಂದು ನಂದಿನಿಕುಮಾರಿ ಅವರು ವಿವರಿಸಿದರು.

ಬೆಳಗಾವಿ ಜಿಲ್ಲೆಯಲ್ಲಿ ಜಂಟಿ ಸಮೀಕ್ಷೆ ಪೂರ್ಣಗೊಂಡಿದೆ. ಪರಿಹಾರ ಪೋರ್ಟ್ ನಲ್ಲಿ ಈಗಾಗಲೇ ಮಾಹಿತಿಯನ್ನು ಅಪ್ ಲೋಡ್ ಮಾಡಲಾಗಿದೆ. ಗ್ರಾಮ ಲೆಕ್ಕಾಧಿಕಾರಿಗಳ ಜತೆಗೆ ಸಹಾಯಕ ಕೃಷಿ ಅಧಿಕಾರಿಗಳಿಗೂ ಲಾಗಿನ್ ಐಡಿ ಒದಗಿಸಿದರೆ ಪರಿಹಾರ ಪ್ರಕ್ರಿಯೆ ಚುರುಕುಗೊಳಿಸಬಹುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಸಲಹೆ ನೀಡಿದರು.

ಬೆಳಗಾವಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ದರ್ಶನ್. ಹೆಚ್.ವಿ ಅವರು ಮಾತನಾಡಿ ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಸಮೀಕ್ಷೆ ಮತ್ತು ಪರಿಹಾರ ಪ್ರಕ್ರಿಯೆ ವಿಳಂಬಗೊಳ್ಳುತ್ತಿದೆ. ಆದ್ದರಿಂದ ತಳಹಂತದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ನೇಮಕಾತಿ ಮಾಡಬೇಕು ಎಂದು ಮನವಿ ಮಾಡಿಕೊಂಡರು.

ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ:

ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯ ಕುರಿತು ಅನೇಕ ಮಕ್ಕಳಿಗೆ ಮಾಹಿತಿ ಇರುವುದಿಲ್ಲ. ಡಿಡಿಪಿಐ ಮೂಲಕ ಎಸ್.ಎಸ್. ಪೊರ್ಟಟಲ್ ನಲ್ಲಿ ಮಕ್ಕಳು ನೋಂದಣಿ ಮಾಡಿಕೊಳ್ಳಲು ಸೂಚನೆ ನೀಡುವಂತೆ ಅಧಿಕಾರಿಗಳು ಕೆಲಸ ಮಾಡಬೇಕಿದೆ ಎಂದು ಕೃಷಿ ಸಚಿವ ಬಿ. ಸಿ. ಪಾಟೀಲ ಅವರು ತಿಳಿಸಿದರು.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಇರುವ ಕೃಷಿ ಸಂಜೀವಿನಿ ನಿರಂತರ ರೈತರಿಗೆ ಯೋಜನೆಗಳ ಮಾಹಿತಿ ನೀಡುವ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಅಧಿಕಾರಿಗಳು ಕೃಷಿ ಇಲಾಖೆಯ ವಿವಿಧ ಯೋಜನೆಗಳ ರೈತರಿಗೆ ತಲುಪುವಂತೆ ಶ್ರಮಿಸಬೇಕು. ಈ ನಿಟ್ಟಿನಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ರೈತ ಬಾಂಧವ ಆಗಲು ಸಾಧ್ಯ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ ಅವರು ಅಧಿಕಾರಿಗಳಿಗೆ ಸಲಹೆ ತಿಳಿಸಿದರು.

ಮುಖ್ಯಮಂತ್ರಿ ರೈತ ವಿದ್ಯಾನಿಧಿಯ ಯೋಜನೆಯ ಅನುಷ್ಠಾನ ಮತ್ತು ಯೋಜನೆಯ ಫಲಾನುಭವಿಗಳ ಅಭಿಪ್ರಾಯಗಳ ಕುರಿತು ಎಲ್. ಇ. ಡಿ ಫಲಕಗಳ ಮೂಲಕ ಪ್ರದರ್ಶಿಸಲಾಯಿತು.

ಜಲಾನಯನ ಅಭಿವೃದ್ಧಿ ಇಲಾಖೆಯ ಆಯುಕ್ತ ಎಂ.ವಿ ವೆಂಕಟೇಶ, ನಿರ್ದೇಶಕ ಬಿ. ವೈ ಶ್ರೀನಿವಾಸ, ಕೃಷಿ ಇಲಾಖೆಯ ಅಪರ ನಿರ್ದೇಶಕ ಎಂ. ಎನ್ ದಿವಾಕರ, ಡಾ. ವಿ. ಜಿ ಪಾಟೀಲ, ಟಿ. ಜಿ ಬಾಲರೆಡ್ಡಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.