ಬೆಳಗಾವಿ, ೧೩: ಬೆಳಗಾವಿಯ ದಲಿತ ಸಂಘಟನೆಗಳು ಕೆಪಿಸಿಸಿ ಕಾರ್ಯಧ್ಯಕ್ಷ, ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲು ಆಗ್ರಹಿಸಿವೆ.
ದಲಿತ ಸಂಘಟನೆಗಳು ಶನಿವಾರ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಲ್ಲೇಶ ಚೌಗಲೆ ಮಾತನಾಡಿದರು. ಸತೀಶ ಜಾರಕಿಹೊಳಿ ಅವರು ಸುಮಾರು 30 ವರ್ಷಗಳಿಂದ ರಾಜಕೀಯದಲ್ಲಿದ್ದು ಶುದ್ಧ ವರ್ಚಸ್ಸನ್ನು ಕಾಪಾಡಿಕೊಂಡು ಬಂದಿದ್ದಾರೆ. ಸರಳರೂ ಸಜ್ಜನರೂ ಆಗಿರುವ ಅವರ ವಿರುದ್ಧ ಯಾವುದೇ ಅವ್ಯವಹಾರದ ಆರೋಪಗಳಿಲ್ಲ. ಬಡವರಿಗೆ ನೊಂದವರಿಗೆ ಯಾವಾಗಲೂ ನೆರವಾಗುತ್ತಿರುವ ಅವರಿಂದ ಕಾಂಗ್ರೆಸ್ ಉತ್ತರ ಕರ್ನಾಟಕದಲ್ಲಿ ಬಲಿಷ್ಠವಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಗೆಲುವು ಸಾಧಿಸಲು ಅವರ ಕೊಡುಗೆ ಅಪಾರವಾಗಿದೆ. ಹಾಗಾಗಿ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಬೇಕೆಂದು ಅವರು ಆಗ್ರಹಿಸಿದರು.
ಸತೀಶ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಲು ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸುರ್ಜೆವಾಲಾ ಅವರಿಗೆ ವಿನಂತಿ ಪತ್ರ ನೀಡಲಾಗುವುದು, ಅವಶ್ಯವೆನಿಸಿದರೆ ರಕ್ತದಲೂ ಪತ್ರ ಬರೆಯಲಾಗುವುದು. ಭೇಟಿಗೆ ಅನುಮತಿ ದೊರೆತರೆ ದಲಿತ ಸಂಘಟನೆಗಳ ನಿಯೋಗವನ್ನೂ ತೆಗೆದುಕೊಂಡು ಹೋಗಿ ಒತ್ತಾಯಿಸಲಾಗುವುದು ಎಂದು ಚೌಗಲೆ ತಿಳಿಸಿದರು.
ಮಹದೇವ ತಳವಾರ ಮತ್ತು ಯಲ್ಲಪ್ಪ ಹುದಲಿ ಮಾತನಾಡಿ, ಸತೀಶ ಜಾರಕಿಹೊಳಿ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡುವುದಾದರೆ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.
ಉತ್ತರ ಕರ್ನಾಟಕ ಜೊತೆಗೆ ಕರ್ನಾಟಕದಲ್ಲಿ ತಮ್ಮದೇಯಾದ ಪ್ರಭಾವವನ್ನು ಸತೀಶ ಹೊಂದಿದ್ದಾರೆ. ಕಳೆದ 40 ವರ್ಷಗಳಿಂದ ಸಾಮಾಜಿಕ ಕಾರ್ಯಗಳಲ್ಲಿ ಗುರುತಿಸಿಕೊಂಡಿರುವ ಅವರು, ತಮ್ಮ ದುಡಿಮೆಯಿಂದಲೇ ಅನೇಕ ಬಡ ಕುಟುಂಬಗಳಿಗೆ ಸಾಮಾಜಿಕ ನ್ಯಾಯ, ವಿದ್ಯಾರ್ಥಿಗಳಿಗೆ, ಕ್ರೀಡಾ ಪಟುಗಳಿಗೆ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಅಭಿವೃದ್ಧಿಗೆ ಪೂರಕವಾಗುವ ಸಾಕಷ್ಟು ಕೆಲಸಗಳನ್ನು ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ. ಅಲ್ಲದೇ ತಮ್ಮ ವ್ಯಕ್ತಿತ್ವಕ್ಕೆ ಯಾವುದೇ ಕಪ್ಪು ಚುಕ್ಕೆ ಬಾರದಂತೆ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ ಎಂದರು.
ಸಚಿವ ಸತೀಶ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷರಾದಾಗಿನಿಂದಲೂ ಪಕ್ಷ ಸಂಘಟನೆಯ ಜೊತೆಗೆ ಅನೇಕ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಂಡು ಬಹುಜನ ಸಮಾಜಕ್ಕೆ ತಮ್ಮದೆಯಾದ ಕೊಡುಗೆ ನೀಡಿದ್ದಾರೆ. ಪರಿಶಿಷ್ಟ ಪಂಗಡ ಸಮುದಾಯದವರಾದ ಅವರು ಎಲ್ಲ ಸಮುದಾಯಗಳ ಶ್ರೇಯೋಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ಕರ್ನಾಟಕದ ಜನಪ್ರಿಯ ರಾಜಕೀಯ ಮತ್ಸದ್ಧಿಯಾಗಿದ್ದಾರೆ. ಆದ್ದರಿಂದ ಅವರನ್ನು ಕಾಂಗ್ರೆಸ್ ಹೈಕಮಾಂಡ್ ರಾಜ್ಯದ ಉಪಮುಖ್ಯಮಂತ್ರಿಯಾಗಿ ಘೋಷಿಸಬೇಕು. ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿದರೆ ಕಾಂಗ್ರೆಸ್ ಇನ್ನಷ್ಟು ಬಲಿಷ್ಠವಾಗುತ್ತದೆ ಎಂದು ಅವರು ಹೇಳಿದರು.
ಒಂದು ವೇಳೆ ಸತೀಶ ಜಾರಕಿಹೊಳಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡದೆ ಹೋದರೆ ರಾಜ್ಯಾದ್ಯಂತ ವಿವಿಧ ದಲಿತ ಸಂಘಟನೆಗಳು ಚಳುವಳಿಯನ್ನು ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಮಹೇಶ ಶೀಗಿಹಳ್ಳಿ, ವಿನೋದ ಸೊಲ್ಲಾಪುರೆ ಸೇರಿದಂತೆ ದಲಿತ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.