ಬೆಳಗಾವಿ : ನಗರದ ಕ್ಲಬ್ ರಸ್ತೆಯಲ್ಲಿ ಕಳೆದ ಸೋಮವಾರ ಪೊಲೀಸ್ ಮತ್ತು ಅರಣ್ಯ ಇಲಾಖೆ ಕಾರ್ಯಾಚರಣೆಯಿಂದ ತಪ್ಪಿಸಿಕೊಂಡು ಪುನಃ ಗಾಲ್ಫ ಕೋರ್ಸ ಮೈದಾನಕ್ಕೆ ನುಸುಳಿರುವ ಚಿರತೆ ಸೆರೆ ಹಿಡಿಯಲು ಇಂದು ಬುಧವಾರ ಆನೆಯ ಮೇಲೆ ಕುಳಿತು ಡಾರ್ಟ್ ಗನ್ ಕಾರ್ಯಾಚರಣೆ ನಡೆಸಲು ತಯಾರಿ ನಡೆಸಲಾಗಿದೆ.
ಮನುಷ್ಯ ಹೋಗಲು ಕಷ್ಟವೇನ್ನಬಹುದಾದ ಅರಣ್ಯ ಪ್ರದೇಶದಲ್ಲಿ ಆನೆಗಳು ಸಲೀಸಾಗಿ ಹೋಗುತ್ತವೆ ಹಾಗಾಗಿ ಆನೆ ಮೇಲೆ ಕುಳಿತ ಮಾಹುತರು ಚಿರತೆ ಪತ್ತೆಯಾದ ತಕ್ಷಣ ಕೆಳಗಿರುವ ಡಾರ್ಟ ಗನ್ ಹೊಂದಿರುವರಿಗೆ ಅದು ಇರುವ ಸ್ಥಳ ತೋರಿಸುವರು.
ಆಗ ಅರವಳಿಕೆ ಔಷಧಿ ಹೊಂದಿರುವ ಗುಂಡುಗಳಿಂದ ಲೋಡ್ ಆದ ಡಾರ್ಟ ಗನ್ ನಿಂದ ಕೆಂಪು ಲೇಸರ್ ಕಿರಣಗಳು ನಿಗದಿತ ಪ್ರಾಣಿಗಳ ಮೇಲೆ ಬೀಳುತ್ತವೆ. ಆಗ ಗುಂಡು ಹಾರಿಸಿದರೆ ಲೇಸರ್ ಕಿರಣ ತೋರಿಸಿದ ಸ್ಥಳಕ್ಕೆ ಬೀಳುತ್ತದೆ. ಪ್ರಾಣಿ ಪ್ರಜ್ಞೆ ಕಳೆದುಕೊಂಡು ಬಿದ್ದ ನಂತರ ಮುಂದಿನ ಕೆಲಸ ಪ್ರಾರಂಭಿಸಲು ಅನುಕೂಲವಾಗಲಿದೆ. ಇನ್ನು ಕಾರ್ಯಾಚರಣೆಗೆ ಆರು ಡಾರ್ಟ್ ಗನ್ ಬಳಸಲಾಗುವದು. ಹಿರಿಯ ಅಧಿಕಾರಿಗಳ ಅಪ್ಪಣೆ ದೊರೆತ ತಕ್ಷಣ ಕಾರ್ಯಾಚರಣೆ ಆರಂಭಿಸಲಾಗುವದು ಎಂದು ಎಸಿಎಫ್ ಮಲ್ಲಿನಾಥ ಕುಸನಾಳ ತಿಳಿಸಿದರು.
ಡಾರ್ಟ ಗನ್ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಈಗಾಗಲೇ ನಾಗರಹೊಳೆ ಸೇರಿದಂತೆ ಹಲವೆಡೆ ಯಶಸ್ವಿಯಾಗಿ ಮಾಡಿದೆ.
ಚಿರತೆಯನ್ನು ಸುಲಭವಾಗಿ ಡಾಟ್ ಮಾಡಲು ತಜ್ಞರ ತಂಡ ಸಿದ್ದವಿದ್ದು ಹಿರಿಯ ಅಧಿಕಾರಿಗಳ ಒಪ್ಪಿಗೆ ಸಿಕ್ಕ ತಕ್ಷಣ ‘ಚಿರತೆ ಡಾರ್ಟ ಗನ್’ ಕಾರ್ಯಾಚರಣೆ ಆರಂಭಗೊಳ್ಳಲಿದೆ ಎಂದು ಎಸಿಎಫ್ ಕುಸನಾಳ ತಿಳಿಸಿದರು.
ಬೆಳಗಾವಿಯಲ್ಲಿ ಚಿರತೆ ಸೆರೆಗೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಅವರು ಈ ವೇಳೆ ಮಧ್ಯಮಗಳೊಂದಿಗೆ ಮಾತನಾಡಿ, ಈ ಕಾರ್ಯಾಚರಣೆಯನ್ನು ಕೈಗೊಳ್ಳಲು ಡಾಟ್ ಮಾಡುವವರು ಹಾಗೂ ಆನೆಯ ಮಾವುತರು ಆಗಮಿಸಿದ್ದಾರೆ. 6 ‘ಡಾರ್ಟ್ ಗನ್’ ಗಳನ್ನು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಕಾರ್ಯಾಚರಣೆಯಲ್ಲಿ 75 ಜನ ಸಿಬ್ಬಂದಿ ಭಾಗಿಯಾಗಿದ್ದಾರೆ.
ಆನೆಯ ಮೇಲೆ ಕುಳಿತು ಕಾರ್ಯಾಚರಣೆಯನ್ನು ಮಾಡುವ ಮಾವುತರು ಒಳ್ಳೆಯ ಅನುಭವ ಹೊಂದಿದ್ದಾರೆ ಎಂದು ಕುಸನಾಳ ತಿಳಿಸಿದರು.