ಸಾಂಗ್ಲಿ, ೨೮- ಕರ್ನಾಟಕ -ಮಹಾರಾಷ್ಟ್ರ ರಾಜ್ಯಗಳ ನಡುವೆ ಗಡಿ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಬಿಟ್ಟು ಕರ್ನಾಟಕ ಸೇರಲು ವಿವಿಧ ಗ್ರಾಮಗಳ ಜನ ಒತ್ತಾಯಿಸಿದ್ದಾರೆ.
ಸಿದ್ದನಾಥ ಗ್ರಾಮಸ್ಥರು ಕರ್ನಾಟಕಕ್ಕೆ ಸೇರಲು ಒಕ್ಕೊರಲ ತೀರ್ಮಾನ ಕೈಗೊಂಡಿದ್ದಾರೆ. ಸಿದ್ದನಾಥ ಗ್ರಾಮದಲ್ಲಿ ಗ್ರಾಮಸ್ಥರು ಹಾಗೂ ಕನ್ನಡ ಪರ ಸಂಘಟನೆಗಳ ಸಭೆ ನಡೆಸಲಾಗಿದೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಸಿದ್ದನಾಥ ಗ್ರಾಮದ ಜನ ಕರ್ನಾಟಕಕ್ಕೆ ಸೇರಲು ನಿರ್ಧರಿಸಿದ್ದು, ಗ್ರಾಮದಲ್ಲಿ ಕನ್ನಡ ಧ್ವಜ ಹಿಡಿದು ಬೃಹತ್ ಮೆರವಣಿಗೆ ನಡೆಸಲಾಗಿದೆ.
ಮಹಾರಾಷ್ಟ್ರ ಸರ್ಕಾರದಿಂದ ನಮ್ಮ ಗಡಿಭಾಗ ಅಭಿವೃದ್ಧಿ ಆಗಿಲ್ಲ. ಕನ್ನಡಿಗರು ಹೆಚ್ಚಾಗಿರುವ ಭಾಗದಲ್ಲಿ ಮೂಲ ಸೌಕರ್ಯ ಕಲ್ಪಿಸುತ್ತಿಲ್ಲ. ಮಹಾರಾಷ್ಟ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದ್ದಾರೆ. ಕರ್ನಾಟಕಕ್ಕೆ ಸೇರುತ್ತೇವೆ ಎಂದು ಮಹಾರಾಷ್ಟ್ರ ಮತ್ತು ಕರ್ನಾಟಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.