ಬೆಂಗಳೂರು, ೧೩- ದಿಲ್ಲಿಯ ಆಮ್ ಆದ್ಮಿ ಸರ್ಕಾರ ತಂದಿರುವ ಯಶಸ್ವಿ ಮೊಹಲ್ಲಾ ಕ್ಲಿನಿಕ್ ತರಹಾ ಸಂಪೂರ್ಣ ಉಚಿತ ಆರೋಗ್ಯ ಸೇವೆ ನೀಡುವ ‘ನಮ್ಮ ಕ್ಲಿನಿಕ್’ ರಾಜ್ಯದಾದ್ಯಂತ ಲೋಕಾರ್ಪಣೆಗೊಳ್ಳಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಳೆ ಬೆಳಿಗ್ಗೆ 11 ಗಂಟೆಗೆ ಇದರ ಉದ್ಘಾಟನೆ ನೆರವೇರಿಸಲಿದ್ದಾರೆ.
ರಾಜ್ಯದಲ್ಲಿ 2023ರ ಜನವರಿ ಅಂತ್ಯದ ವೇಳೆಗೆ ಒಟ್ಟು 438 ನಮ್ಮ ಕ್ಲಿನಿಕ್ ಆರಂಭಗೊಳ್ಳಲಿದ್ದು, ಮೊದಲ ಹಂತದಲ್ಲಿ ಅಂದರೆ ಡಿಸೆಂಬರ್ 14ರ ನಾಳೆಯಿಂದ 114 ‘ನಮ್ಮ ಕ್ಲಿನಿಕ್’ ಗಳು ಕಾರ್ಯ ನಿರ್ವಹಿಸಲಿವೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ ಈ ವಿಷಯ ತಿಳಿಸಿದ್ದಾರೆ.
ರಾಜ್ಯದಲ್ಲಿ ಆರಂಭವಾಗಲಿರುವ ಒಟ್ಟು 438 ನಮ್ಮ ಕ್ಲಿನಿಕ್ ಗಳ ಪೈಕಿ, ಬಾಗಲಕೋಟ 18, ಬಳ್ಳಾರಿ 11, ಬೆಳಗಾವಿ 21, ವಿಜಯನಗರ 6, ಬೆಂಗಳೂರು ಗ್ರಾಮಾಂತರ 9, ಬೀದರ 6, ಚಾಮರಾಜನಗರ 3, ಚಿಕ್ಕಬಳ್ಳಾಪುರ 3, ಚಿಕ್ಕಮಗಳೂರು 4, ಚಿತ್ರದುರ್ಗ 1, ದಕ್ಷಿಣ ಕನ್ನಡ 12, ಧಾರವಾಡ 6, ಗದಗ 11, ಹಾಸನ 5, ಹಾವೇರಿ 5, ಕಲಬುರಗಿ 11, ಕೊಡಗು 1, ಕೋಲಾರ 3, ಕೊಪ್ಪಳ 3, ಮಂಡ್ಯ 4, ಮೈಸೂರು 6, ರಾಯಚೂರು 8, ರಾಮನಗರ 3, ತುಮಕೂರು 10, ಉಡುಪಿ 10, ಉತ್ತರ ಕನ್ನಡ 10, ವಿಜಯಪುರ 10, ಯಾದಗಿರಿ 3 ಹಾಗೂ ಬೆಂಗಳೂರು ಬಿಬಿಎಂಪಿ ವ್ಯಾಪ್ತಿಯಲ್ಲಿ 243 ಕ್ಲಿನಿಕ್ ಗಳು ಕಾರ್ಯ ನಿರ್ವಹಿಸಲಿವೆ.