ಬೆಳಗಾವಿ : ತಮ್ಮ ಸಮುದಾಯವನ್ನು 2ಎ ಮೀಸಲಾತಿ ಗುಂಪಿನಲ್ಲಿ ಸೇರಿಸಲು ಬಿಜೆಪಿ ಸರಕಾರ ಹಿಂಜರಿಯುತ್ತಿದೆ ಎಂದು ಆರೋಪಿಸಿ ಪಂಚಮಸಾಲಿ ಸಮುದಾಯದವರು ಜಿಲ್ಲೆಯ ಹುಕ್ಕೇರಿ ತಾಲೂಕಿನ ಹತ್ತರಗಿಯ ಟೋಲ್ ನಾಕಾ ಬಳಿ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಇದರಿಂದ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡು ಜನ ತೊಂದರೆಗೆ ಒಳಗಾದರು.
ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪಂಚಮಸಾಲಿಗಳು ತಮ್ಮ ಅಸಮಾಧಾನ ವ್ಯಕ್ತ ಪಡಿಸಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಹತ್ತರಗಿಯ ಟೋಲ್ ಗೇಟ್ ಬಳಿ ಬಿಗಿ ಪೊಲೀಸ್ ಬಂದೋಬಸ್ತ ಮಾಡಲಾಗಿದೆ.
ಪಂಚಮಸಾಲಿ 2 ಎ ಮೀಸಲಾತಿ ಹೋರಾಟದ ಭಾಗವಾಗಿ ಪಂಚಮಸಾಲಿ ಸಮುದಾಯದವರು ರಾಜ್ಯದಾದ್ಯಂತ ರಾಜ್ಯ ಮತ್ತು ರಾಷ್ಟ್ರ ಹೆದ್ದಾರಿಗಳನ್ನು ತಡೆದು ಪ್ರತಿಭಟನೆ ನಡೆಸುವಂತೆ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಕರೆ ನೀಡಿದ್ದರು.
ಓರ್ವ ಇನ್ಸಪೆಕ್ಟರ್, ಇಬ್ಬರು ಸಹಾಯಕ ಇನ್ಸಪೆಕ್ಟರ್ ಸೇರಿದಂತೆ ನೂರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಬಂದೋಬಸ್ತ್ ಗಾಗಿ ನಿಯೋಜನೆ ಮಾಡಲಾಗಿದೆ.