ಬಳ್ಳಾರಿ : ಇತ್ತಿತ್ತಲಾಗಿ ಜನರು ಕಾನೂನು ಉಲ್ಲಂಘಿಸಿ ಗುಂಪು ದೌರ್ಜನ್ಯ ನಡೆಸುವ ಪ್ರಕರಣಗಳು ಎಲ್ಲೆಡೆ ನಡೆಯುತ್ತಿದ್ದು ಯಾವುದೇ ಹೆದರಿಕೆ ಇಲ್ಲದೇ ತಾವೇ ಕಾನೂನು ಎಂಬಂತೆ ವರ್ತಿಸುತ್ತಿರುವುದು ಹಲವೆಡೆ ಕಂಡು ಬರುತ್ತಿದೆ. ನಕಲಿ ಪೊಲೀಸ್ ಎಂದು ಡೆಪ್ಯುಟಿ ಫಾರೆಸ್ಟ್ ರೇಂಜರ್ ಆಫೀಸರ್ ಮೇಲೆ ಜನ ಹಲ್ಲೆ ನಡೆಸಿದ ಘಟನೆ ನಗರದ ವಿಮ್ಸ ಆಸ್ಪತ್ರೆ ಸಮೀಪ ನಡೆದಿದೆ.
ಡೆಪ್ಯುಟಿ ಫಾರೆಸ್ಟ್ ರೇಂಜರ್ ಕೆಂಚಪ್ಪ ಅವರ ಮೇಲೆ ಜನರು ಹಲ್ಲೆ ನಡೆಸಿದ್ದಾರೆ. ಪೊಲೀಸರ ಸೋಗಿನಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಹಲ್ಲೆ ನಡೆಸಿದ್ದಾರೆ.
ಹೋಟೆಲ್ ಹಾಗೂ ಅಂಗಡಿಗಳಲ್ಲಿ ಕೆಂಚಪ್ಪ ಹಣ ವಸೂಲಿ ಮಾಡುತ್ತಿದ್ದರೆನ್ನಲಾಗಿದ್ದು ಮೂರು ಸ್ಟಾರ್ ಹಾಕಿಕೊಂಡಿದ್ದರಿಂದ ಕೆಂಚಪ್ಪರ ಮೇಲೆ ಅನುಮಾನಗೊಂಡ ಹೋಟೆಲ್ ಸಿಬ್ಬಂದಿ ಕೌಲ್ ಬಜಾರ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಬರುವಷ್ಟರಲ್ಲಿ ನಕಲಿ ಪೊಲೀಸ್ ಎಂದು ತಿಳಿದು ಕೆಂಚಪ್ಪ ಅವರನ್ನು ಸಾರ್ವಜನಿಕರು ಮನಬಂದಂತೆ ಥಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದ ಮೇಲೆ ಅವರು ಡೆಪ್ಯುಟಿ ಫಾರೆಸ್ಟ್ ರೇಂಜರ್ ಎಂದು ಗೊತ್ತಾಗಿದೆ.