ಧಾರವಾಡ: ಹೆದ್ದಾರಿ ನಿರ್ಮಿಸಲು ವಶಪಡಿಸಿಕೊಂಡ ಜಮೀನಿಗೆ ಪರಿಹಾರ ಮೊತ್ತ ನೀಡದ ಹೆದ್ದಾರಿ ಪ್ರಾಧಿಕಾರದ ಕಚೇರಿಯನ್ನು ಜಿಲ್ಲಾ ನ್ಯಾಯಾಲಯದ ಆದೇಶದಂತೆ ಜಫ್ತು ಮಾಡಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇಲ್ಲಿಯವರೆಗೆ ವಶಪಡಿಸಿಕೊಂಡ ಜಮೀನಿನ ಹಣವನ್ನು ನೀಡದ ಪರಿಣಾಮ ಕೋರ್ಟಗೆ ಹೋಗಿದ್ದ ರಾಮಚಂದ್ರಪ್ಪ ಅಡ್ಡೇದಾರ ಎಂಬ ಸಂತ್ರಸ್ತರ ಪರವಾಗಿ ನ್ಯಾಯಾಲಯ ತೀರ್ಪು ನೀಡಿದೆ. ಹೆದ್ದಾರಿ ಪ್ರಾಧಿಕಾರದ ಕಚೇರಿಯನ್ನು ಜಪ್ತಿ ಮಾಡಲು ಆದೇಶ ಹೊರಡಿಸಿ, ಧಾರವಾಡದ ವಿದ್ಯಾಗಿರಿ ಬಡಾವಣೆಯಲ್ಲಿರುವ ಪ್ರಾಧಿಕಾರದ ಕಚೇರಿಯನ್ನು ಇಂದು ಜಪ್ತಿ ಮಾಡಲಾಗಿದೆ.
ಹೆದ್ದಾರಿ-63 ರ ನಿರ್ಮಾಣ ಮಾಡಲು ಗದಗ ಜಿಲ್ಲೆಯ ಹಳ್ಳಿಕೇರಿ ಗ್ರಾಮದ ರಾಮಚಂದ್ರಪ್ಪ ಅಡ್ಡೇದಾರ ಎನ್ನುವವರ 3 ಎಕರೆ ಜಮೀನನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಪ್ರತಿ ಚದರ ಅಡಿಗೆ 79 ರೂ. ಹಣವನ್ನು ನಿಗದಿ ಮಾಡಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇಲ್ಲಿಯವರೆಗೆ ವಶಪಡಿಸಿಕೊಂಡ ಜಮೀನಿನ ಪರಿಹಾರದ ಹಣವನ್ನು ನೀಡದ ಪರಿಣಾಮ ನ್ಯಾಯಾಲಯದ ಮೊರೆ ಹೋಗಿದ್ದರು.
ಅತಿ ಕಡಿಮೆ ದರ ನಿಗದಿ ಮಾಡಿದ್ದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಬಗ್ಗೆ ಡಿಸಿ ಕೋರ್ಟ ಹೋಗಿದ್ದ ರಾಮಚಂದ್ರಪ್ಪ ಅಡ್ಡೇದಾರ ಅವರು ಡಿಸಿ ಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ನಂತರ ಡಿಸಿ ಕೋರ್ಟ ಪ್ರತಿ ಚದರ ಅಡಿಗೆ 79 ರೂ. ನೀಡಲು ಆದೇಶಿಸಿತ್ತು.
ಆದರೂ ಅಧಿಕಾರಿಗಳು ಇದುವರೆಗೆ ಪರಿಹಾರ ನೀಡಿಲ್ಲದ ಕಾರಣ ರಾಮಚಂದ್ರಪ್ಪ ಅವರು ಧಾರವಾಡ ಜಿಲ್ಲಾ ಕೋರ್ಟ ಮೊರೆ ಹೋಗಿದ್ದರು. ಇದೀಗ ಕಚೇರಿ ಜಪ್ತಿಗೆ ಆದೇಶಿಸಿ ನ್ಯಾಯಾಲಯದ ಸಿಬ್ಬಂದಿಯಿಂದ ಕಚೇರಿ ಪೀಠೋಪಕರಣ, ಕಂಪ್ಯೂಟರ್, ಪ್ರಿಂಟರ್ ಸೇರಿ ವಾಹನವನ್ನು ಜಪ್ತಿ ಮಾಡಿದೆ.