ಬೆಂಗಳೂರು: ನಮ್ಮ ಕ್ಲಿನಿಕ್ ಗಳ ಮೂಲಕ 30 ವರ್ಷ ಮೇಲ್ಪಟ್ಟ ಪ್ರತಿ ವ್ಯಕ್ತಿಗೂ ಮಧುಮೇಹ ತಪಾಸಣೆ ಮಾಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ ತಿಳಿಸಿದ್ದಾರೆ.
ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜಿನಲ್ಲಿ ನಡೆದ ಆರೋಗ್ಯ ಸಿಟಿ ಸಮ್ಮಿಟ್ ನಲ್ಲಿ ಮಾತನಾಡಿದ ಅವರು, ಮಧುಮೇಹ ಸೇರಿದಂತೆ ಅಸಾಂಕ್ರಾಮಿಕ ರೋಗಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ನಮ್ಮ ಕ್ಲಿನಿಕ್ ಗಳ ಮೂಲಕ 30 ವರ್ಷ ಮೀರಿದ ಪ್ರತಿಯೊಬ್ಬರಿಗೂ ಮಧುಮೇಹ ತಪಾಸಣೆ ಮಾಡಲಾಗುವುದು ಎಂದರು.
ರಾಜ್ಯದ ವಿವಿಧ ನಗರಗಳಲ್ಲಿ 438 ನಮ್ಮ ಕ್ಲಿನಿಕ್ ಗಳನ್ನು ಆರಂಭಿಸಲಾಗುವುದು. ಈಗಾಗಲೇ 200ಕ್ಕೂ ಅಧಿಕ ಕ್ಲಿನಿಕ್ ಗಳು ಸಿದ್ಧವಾಗಿದ್ದು, ಈ ತಿಂಗಳಂತೆಕ್ಕೆ 100 ಕ್ಲಿನಿಕ್ ಗಳನ್ನು ಉದ್ಘಾಟಿಸಲಾಗುವುದು. ಕೊಳಗೇರಿ ಹಾಗೂ ಬಡವರು ವಾಸಿಸುವ ಪ್ರದೇಶದಲ್ಲಿ ಕ್ಲಿನಿಕ್ ಗಳನ್ನು ಆರಂಭಿಸಿ ಆರೋಗ್ಯ ತಪಾಸಣೆ ಮಾಡಲಾಗುವುದು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ 6500ಕ್ಕೂ ಅಧಿಕ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಆರಂಭಿಸಲಾಗಿದೆ. ಈ ಕೇಂದ್ರಗಳಲ್ಲಿಯೂ ಮಧುಮೇಹ ತಪಾಸಣೆ ಮಾಡಲಾಗುವುದು. 18 ತಿಂಗಳಲ್ಲಿ ರಾಜ್ಯದ ಶೇ. 100 ರಷ್ಟು ಜನರ ಆರೋಗ್ಯ ತಪಾಸಭೆ ಗುರಿ ಹೊಂದಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.