ಬೆಳಗಾವಿ, 5: ಬಿಜೆಪಿ ಮುಖಂಡ ಪೃಥ್ವಿ ಸಿಂಗ್ ಹಲ್ಲೆ ವಿಚಾರ ಗಮನಕ್ಕೆ ಬಂದಿದ್ದು ಪೊಲೀಸರು ತನಿಖೆ ಮಾಡಿ ವರದಿ ನೀಡುತ್ತಾರೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಪೃಥ್ವಿ ಸಿಂಗ್ ಯಾರು, ಅವರ ಹಿನ್ನಲೆ ಏನು, ಚಾಕುವಿನಿಂದ ಯಾಕೆ ಹಲ್ಲೆ ಮಾಡಲಾಗಿದೆ ಎನ್ನುವುದು ತನಿಖೆ ಮೂಲಕ ಗೊತ್ತಾಗಬೇಕಿದೆ. ಪೊಲೀಸರು ತನಿಖೆ ಮಾಡುತ್ತಿದ್ದು ಅವರ ವರದಿ ನೀಡಿದ ಮೇಲೆ ಮುಂದಿನ ಆ ಬಗ್ಗೆ ತಿಳಿಸುವುದಾಗಿ ಅವರು ಹೇಳಿದರು.
ಸೋಮವಾರ ರಾತ್ರಿ ಪೃಥ್ವಿ ಸಿಂಗ್ ಚಿಕಿತ್ಸೆ ಪಡೆಯುತ್ತಿರುವ ಕೆಎಲ್ ಇ ಆಸ್ಪತ್ರೆಗೆ ಭೆಟ್ಟಿ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು “ಪೋಲೀಸರ ಮೇಲೆ ನಮಗೆ ನಂಬಿಕೆಯಿಲ್ಲ” ಎಂದು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, “ಅದೊಂದು ರಾಜಕೀಯ ಹೇಳಿಕೆ, ಆರು ತಿಂಗಳ ಹಿಂದೆ ಅವರಿಗೆ ಪೋಲೀಸರ ಮೇಲೆ ಪೂರ್ಣ ನಂಬಿಕೆ, ಭರವಸೆ ಇತ್ತು. ಇಷ್ಟು ಬೇಗ ಅವರು ನಂಬಿಕೆ ಕಳೆದುಕೊಂಡರೇ, ಇದಕ್ಕೇನು ಏನು ಕಾರಣ, ಯಾರ ಮೇಲೆ ಬಿಜೆಪಿಯವರಿಗೆ ನಂಬಿಕೆಯಿದೆ? ಎಂದು ಪ್ರಶ್ನಿಸಿದರು.
ಬಿಜೆಪಿಯವರಿಗೆ ಪೋಲೀಸರ ಮೇಲೆ ತಮಗೆ ಬೇಕಾದಾಗ ನಂಬಿಕೆ ಇರುತ್ತೆ, ಬೇಡವಾದಾಗ ನಂಬಿಕೆ ಇರೊಲ್ಲ. ಕಾನೂನು ಎಲ್ಲರಿಗೂ ನ್ಯಾಯವನ್ನು ಒದಗಿಸುವ ಕಾರ್ಯ ಮಾಡುತ್ತಿದೆ ಅವರ ಮೇಲೆ ನಂಬಿಕೆ ಇಡಬೇಕಾಗುತ್ತದೆ ಎಂದು ಗೃಹ ಮಂತ್ರಿ ಹೇಳಿದರು.