ಬೆಂಗಳೂರು: ಮತದಾರರ ಪಟ್ಟಿಯಲ್ಲಿ ಹೆಸರು ತೆಗೆಯುವುದಕ್ಕೆ ಅಥವಾ ಸೇರಿಸುವುದಕ್ಕೆ ಫಾರಂ 7 ಅತ್ಯಗತ್ಯ. ಈ ಅರ್ಜಿಗಳು ಇಲ್ಲದೇ 27 ಲಕ್ಷ ಹೆಸರು ತೆಗೆದು ಹಾಕಿದ್ದು ಹೇಗೆ ? ಹೆಸರು ತೆಗೆಯಲು ಸಹಿ ಹಾಕಿದವರು ಯಾರು ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ, ಚಿಲುಮೆ ಸಂಸ್ಥೆಯ ಅಧಿಕಾರಿಗಳು ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಈ ರೀತಿ ನಡೆದುಕೊಂಡಿದ್ದರೆ ಹಿಂದಿನ ಕಾರಣವೇನು ? ಚುನಾವಣಾ ಆಯೋಗ ಅಧಿಕಾರಿಗಳ ಭೇಟಿಗೆ ನಾಳೆ ಸಮಯ ನೀಡಿದ್ದಾರೆ. ನಾಳೆ ಭೇಟಿ ಮಾಡಿ ನಮ್ಮ ದೂರು ನೀಡುತ್ತೇವೆ ಎಂದರು.
ಈ ಪ್ರಕರಣದಲ್ಲಿ ಸಾಕಷ್ಟು ಕಾನೂನು ಅಂಶಗಳಿವೆ. ಮತದಾರರ ಮಾಹಿತಿ ತೆಗೆದುಕೊಳ್ಳುವ ಅವಕಾಶ ಯಾರಿಗೂ ಇಲ್ಲ. ರಾಜ್ಯದಲ್ಲಿ 8250 ಬೂತ್ ಗಳಿವೆ. ಪ್ರತಿ ಬೂತ್ ಗೆ ಒಬ್ಬರನ್ನು ನೇಮಕ ಮಾಡಬೇಕು. ಕೇವಲ ಚಿಲುಮೆ ಸಂಸ್ಥೆ ಮಾತ್ರವಲ್ಲ, 7 ಸಾವಿರಕ್ಕೂ ಹೆಚ್ಚು ಜನರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗಿದೆ. ಎಲ್ಲಾ 28 ಕ್ಷೇತ್ರ ಚುನಾವಣಾಧಿಕಾರಿಗಳ ಮೇಲೂ ಪ್ರಕರಣ ದಾಖಲಿಸಿ ತನಿಖೆ ನಡೆಸಲಿ ಎಂದು ಆಗ್ರಹಿಸಿದರು.
ಬಂಧಿತರು ಒತ್ತಡದಿಂದ ಕೆಲಸ ಮಾಡಿದ್ದಾಗಿ ಮತ್ತು ಮೇಲಧಿಕಾರಿಯ ಸೂಚನೆಯಂತೆ ನಡೆದುಕೊಂಡಿದ್ದಾಗಿ ಹೇಳಿದ್ದಾರೆ ಎನ್ನಲಾಗಿದೆ. ಹೀಗೆ ಮಾಡಿ ಎಂದು ಹೇಳಿಕೊಟ್ಟವರು ಯಾರು ? ಈ ಮೇಲಾಧಿಕಾರಿಗಳು ಯಾರು ? ನಾನಾ, ಸಿದ್ದರಾಮಯ್ಯನವರಾ, ಯಡಿಯರಪ್ಪನವರಾ, ಬೊಮ್ಮಾಯಿ ಅವರಾ ? ಈ ವಿಚಾರ ತನಿಖೆಯಾಗಲಿ ಎಂದು ಹೇಳಿದರು.