ಗೋಕಾಕ : ಗೋಕಾಕ ಬಂಗಾರದ ವ್ಯಾಪಾರಿ ರಾಜು ಝವರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾದ ಡಾ. ಸಚಿನ್ ಶಿರಗಾವಿ ಮತ್ತು ಹುಕ್ಕೇರಿಯ ವೈದ್ಯ ಡಾ. ಶಿವಾನಂದ ಪಾಟೀಲ ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದು, ನ್ಯಾಯಾಲಯವು 14 ದಿನ ಕಸ್ಟಡಿಗೆ ಒಪ್ಪಿಸಿದೆ.
ಕಳೆದ ಫೆಬ್ರುವರಿ 20 ರಂದು ಝವರ್ ಅವರನ್ನು ಡಾ. ಸಚಿನ್ ಶಿರಗಾವಿ, ಹುಕ್ಕೇರಿ ತಾಲ್ಲೂಕಿನ ಶಿರಾಡ್ಯಾಣ ಗ್ರಾಮದ ಆಯುರ್ವೇದ ವೈದ್ಯ ಡಾ. ಶಿವಾನಂದ ಕಾಡಗೌಡ ಪಾಟೀಲ ಅವರು ಮೂವರು ಬಾಡಿಗೆ ಹಂತಕರ ಸಹಾಯದಿಂದ ಗೋಕಾಕದ ಯೋಗಿಕೊಳ್ಳದಲ್ಲಿ ಕೊಲೆ ಮಾಡಿದ್ದಾರೆ. ಪೊಲೀಸ್ ವಿಚಾರಣೆಯಲ್ಲಿ ಡಾ.ಪಾಟೀಲರ ಪಾತ್ರ ಇರುವ ಬಗ್ಗೆ ಗೊತ್ತಾದಾಗ ಅವರನ್ನೂ ಸಹ ವಶಕ್ಕೆ ಪಡೆದು, ಅವರಿಂದ ಮಾಹಿತಿ ಪಡೆದುಕೊಂಡು ನಂತರ ನ್ಯಾಯಾಂಗದ ವಶಕ್ಕೆ ನೀಡಲಾಗಿದೆ.
ಝವರ್ ಮೇಲೆ ಹಲ್ಲೆಯಾಗಿ ಐದು ದಿನಗಳಾಗಿದ್ದು ಆರೋಪಿಗಳು ತಾವು ಮಾಡಿರುವ ಕೊಲೆಯನ್ನು ಸಹ ಒಪ್ಪಿಕೊಂಡಿದ್ದಾರೆ. ಆದರೂ ಝವರ್ ಅವರ ಪತ್ತೆಯಾಗಿಲ್ಲ. ಹಾಗಾಗಿ ನಾವು ಅವರ ಕೊಲೆಯಾಗಿದೆ ಎಂಬ ತೀರ್ಮಾನಕ್ಕೆ ಬಂದಿದ್ದೇವೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ದೊರೆತ ರಕ್ತವನ್ನು ಪರೀಕ್ಷೆ ನಡೆಸಿದಾಗ ಅದು ಸಚಿನ್ ಅವರ ರಕ್ತಕ್ಕೆ ಹೊಂದಾಣಿಕೆ ಆಗಿದೆ ಎಂದು ತಿಳಿದು ಬಂದಿದೆ. ಆ ಕಾರಣ ಅವರ ಕೊಲೆಯಾಗಿರುವುದು ಖಚಿತ ಎಂಬ ನಿರ್ಣಯಕ್ಕೆ ಪೊಲೀಸರು ಬಂದಿದ್ದಾರೆ ಎನ್ನಲಾಗಿದೆ.
ಝವರ್ ಅವರಿಂದ 1.90 ಕೋಟಿ ರೂಪಾಯಿ ಹಣ ಸಾಲದ ರೂಪದಲ್ಲಿ ಪಡೆದಿದ್ದ ಗೋಕಾಕ ನಿವಾಸಿ ಡಾ. ಶಿರಗಾವಿ ಅವರು ಸ್ನೇಹಿತನಾದ ರಾಜು ಝವರ್ ಅವರನ್ನು ತಮ್ಮದೇ ಕಾರಿನಲ್ಲಿ ಕರೆದುಕೊಂಡು ಯೋಗಿಕೊಳ್ಳದ ಬಳಿ ಚಾಕುವಿನಿಂದ ಇರಿದು, ಕುತ್ತಿಗೆ ಕತ್ತರಿಸಿ ನೀರಿಗೆ ಎಸೆದಿದ್ದರು. ಇದಕ್ಕೆ ಡಾ. ಶಿವಾನಂದ ಪಾಟೀಲ ಮತ್ತು ಮೂವರು ಬಾಡಿಗೆ ಹಂತಕರ ಸಹಾಯ ಬಳಸಲಾಗಿದೆ. ಮೂವರೂ ಬಾಡಿಗೆ ಹಂತಕರು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.