ಗೋಕಾಕ, (ಸಮದರ್ಶಿ ವಿಶೇಷ ವರದಿ) : ಕಳೆದ ಶುಕ್ರವಾರ ರಾತ್ರಿಯಿಂದ ಕಾಣೆಯಾಗಿರುವ ಗೋಕಾಕದ ಪ್ರತಿಷ್ಠಿತ ಝವರ್ ಕುಟುಂಬದ ಬಂಗಾರದ ವ್ಯಾಪಾರಿ ರಾಜು ಝವರ್ ಅವರನ್ನು ವೈದ್ಯ ಸಚಿನ ಶಿರಗಾವಿ ಸೇರಿದಂತೆ ಮೂವರು ಸುಪಾರಿ ಹಂತಕರು ಹತ್ಯೆ ಮಾಡಿದ್ದಾರೆ. ತನ್ನದೇ ಕಾರಿನಲ್ಲಿ ಯೋಗಿಕೊಳ್ಳ ರಸ್ತೆಗೆ ಕರೆದುಕೊಂಡು ಹೋಗಿ ಹರಿತವಾದ ಚಾಕುವಿನಿಂದ ಕುತ್ತಿಗೆ ಕತ್ತರಿಸಿ ದೇಹದ ಇತರ ಭಾಗಗಳಿಗೂ ಇರಿದು, ನಂತರ ಸತ್ತನೆಂದು ಭಾವಿಸಿ ಶವವನ್ನು ಕಾಲುವೆಗೆ ಎಸೆದಿದ್ದಾರೆ ಎನ್ನಲಾಗಿದೆ.
ಝವರ್ ಹತ್ಯೆಗೆ ಸಚಿನ ಶಿರಗಾವಿಯು ಶಫಾತ್ ತ್ರಾಸಗರ್, ಅಬ್ದುಲ್ಲಾ ಮುಲ್ಲಾ ಮತ್ತು ಮೋಹಿನ್ ಪಟೇಲ್ ಅವರ ನೆರವು ಪಡೆದಿದ್ದ. ತ್ರಾಸಗರ್ ಬೆಳಗಾವಿ ಹಿಂಡಲಗಾ ಸೆರೆಮನೆಯಲ್ಲಿದ್ದರೆ, ಉಳಿದ ಇಬ್ಬರು ಭೂಗತರಾಗಿದ್ದಾರೆ. ಝವಾರ ಹತ್ಯೆಗೆ ನೆರವು ನೀಡಿದರೆ 50,000 ಸಾವಿರ ರೂಪಾಯಿ ನೀಡುವದಾಗಿ ವೈದ್ಯ ಶಿರಗಾವಿ ಭರವಸೆ ನೀಡಿ ಸ್ವಲ್ಪ ಮೊತ್ತ ಮುಂಗಡವಾಗಿ ನೀಡಿದ್ದ ಎನ್ನಲಾಗುತ್ತಿದೆ.
ಮೊದಲು ಅಲ್ಪಸ್ವಲ್ಪ ಪರಿಚಯವಿದ್ದ ಝವರ ಮತ್ತು ಡಾ. ಶಿರಗಾವಿಯ ಸ್ನೇಹ ಕೋವಿಡ್ ಸಮಯದಲ್ಲಿ ಹೆಚ್ಚು ದೃಢವಾಯಿತು. ಆಗ ರಾಜು ಝವರ ಅವರ ಬಳಿ ತಮ್ಮ ಸ್ಥಿರಾಸ್ತಿಯ ಕಾಗದಪತ್ರಗಳನ್ನು ಒತ್ತೆಯಿಟ್ಟು, ಡಾ.ಸಚಿನ ಬಡ್ಡಿಯ ಮೇಲೆ 1.90 ಕೋಟಿ ರೂಪಾಯಿ ಸಾಲ ಪಡೆದಿದ್ದ. ಆದರೆ ಈ ವರೆಗೂ ಒಂದು ರೂಪಾಯಿಯನ್ನೂ ಹಿಂದಿರುಗಿಸಿರಲಿಲ್ಲ ಹಾಗು ಈ ಕುರಿತು ಇಬ್ಬರ ನಡುವೆ ಹಲವು ಬಾರಿ ವಾದ ವಿವಾದವುಂಟಾಗಿತ್ತು ಎನ್ನಲಾಗಿದೆ.
ನೀಡಿದ್ದ ಸಾಲ ಹಿಂದಿರುಗಿಸಲು ಒತ್ತಾಯಿಸುತ್ತಿದ್ದ ಝವರ್ ಅವರನ್ನು ಸ್ವಲ್ಪ ಹಣ ಹಿಂದಿರುಗಿಸುವದಾಗಿಯೂ, ತಮ್ಮ ಆಸ್ಪತ್ರೆಗೆ ಬರಬೇಕೆಂದು ಕರೆಯಿಸಿಕೊಂಡಿದ್ದ ಡಾ. ಶಿರಗಾವಿ, ಅವರ ಬೈಕ್ ತಮ್ಮ ಆಸ್ಪತ್ರೆ ಮುಂದೆ ನಿಲ್ಲಿಸಿ ತಮ್ಮ ಕಾರಿನಲ್ಲಿ ಯೋಗಿಕೊಳ್ಳಕ್ಕೆ ಕರೆದುಕೊಂಡು ಹೋಗಿದ್ದ. ಆಗ ಜೊತೆಯಲ್ಲಿ ಇಬ್ಬರು ಬಾಡಿಗೆ ಹಂತಕರೂ ಇದ್ದರು. ಯೋಗಿಕೊಳ್ಳದಲ್ಲಿ ಕಾರ್ ನಿಲ್ಲಿಸಿ ರಾಜು ಝವರ್ ಅವರನ್ನು ಕೆಳಕ್ಕಿಳಿಸಿ ಮೂವರೂ ಚಾಕುವಿನಿಂದ ಅವರ ಮೇಲೆ ದಾಳಿ ಮಾಡಿ ಕುತ್ತಿಗೆಗೆ ಮತ್ತು ಇತರ ಅಂಗಗಳಿಗೆ ಇರಿದು, ಸತ್ತರೆಂದು ಭಾವಿಸಿ ಅವರನ್ನು ಕಾಲುವೆಗೆ ಎಸೆದು ಪರಾರಿಯಾದರು ಎಂದು ಹೇಳಲಾಗಿದೆ.
ʼʼಡಾ. ಶಿರಗಾವಿ ಹಣ ನೀಡಲು ಕರೆದಿದ್ದಾರೆ, ಹೋಗಿ ಬರುತ್ತೇನೆʼʼ ಎಂದು ಮನೆಯವರಿಗೆ ತಿಳಿಸಿದ್ದ ರಾಜು ಅವರು, ತಡರಾತ್ರಿಯಾದರೂ ಹಿಂದಿರುಗದ್ದರಿಂದ ಮತ್ತು ಅವರ ಮೊಬೈಲ್ ಬಂದ್ ಆಗಿದ್ದರಿಂದ ಮನೆಯವರು ಡಾ. ಶಿರಗಾವಿಗೆ ಕಾಲ್ ಮಾಡಿದ್ದಾರೆ. ಆದರೆ ಅವರು ಕಾಲ್ ತೆಗೆದುಕೊಂಡಿಲ್ಲ. ಆಗ ಮನೆಯವರು ಗೋಕಾಕ ಪೊಲೀಸರಿಗೆ ರಾಜು ಅವರು ಕಾಣೆಯಾಗಿದ್ದ ಪ್ರಕರಣ ದಾಖಲಿಸಿದ್ದರು.
ಅದೇ ರಾತ್ರಿ ಡಾ. ಶಿರಗಾವಿ ಆಸ್ಪತ್ರೆಗೆ ಹೋಗಿದ್ದ ಪೊಲೀಸರು, ರಾಜು ಅವರ ಬೈಕ್ ಆಸ್ಪತ್ರೆಯ ಆವರಣದಲ್ಲಿ ನಿಂತಿರುವದನ್ನು ಕಂಡು ಡಾ. ಶಿರಗಾವಿಯವರನ್ನು ವಿಚಾರಿಸಿದಾಗ ರಾಜು ಝವರ್ ಅವರು ಯಾವಾಗ ಬೈಕ್ ನಿಲ್ಲಿಸಿ ಹೋದರು ತಮಗೆ ಗೊತ್ತಿಲ್ಲ. ತಾವು ಫೋನ್ ತೆಗೆದುಕೊಳ್ಳದೇ ಇರುವದಕ್ಕೆ ಫೋನ್ ಸೈಲೆಂಟ್ ಮೋಡ್ ನಲ್ಲಿಟ್ಟಿದ್ದೇ ಕಾರಣವೆಂದು ತಿಳಿಸಿದ್ದರು.
ಆದರೂ ಸಂಶಯಗೊಂಡ ಪೊಲೀಸರು ರಾಜು ಝವರ್ ಮತ್ತು ಡಾ. ಶಿರಗಾವಿ ವ್ಯವಹಾರ ಕುರಿತು ಹೆಚ್ಚಿನ ವಿಚಾರಣೆ, ತನಿಖೆ ನಡೆಸಿರುವಾಗಲೇ ಮಹಾರಾಷ್ಟ್ರ ಪೊಲೀಸರು ಡಾ. ಸಚಿನ ಶಿರಗಾವಿಯನ್ನು ಹುಡುಕಿಕೊಂಡು ಅವರ ಮನೆಗೆ ತೆರಳಿದ್ದಾರೆ. ಅವರು ಮನೆಯಲ್ಲಿರದ ಕಾರಣ ಗೋಕಾಕ್ ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ನೀಡಿ ನೆರವು ಕೋರಿದ್ದಾರೆ. ಡಾ. ಶಿರಗಾವಿ ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದಂತೆ ತಮಗೆ ಬೇಕಾಗಿದ್ದಾರೆಂದು ತಿಳಿಸಿದ್ದಾರೆ. ಆಗ ಗೋಕಾಕ ಪೊಲೀಸರು ರಾಜು ಝವರ್ ಅವರ ಪ್ರಕರಣದ ಕುರಿತು ಹೆಚ್ಚಿನ ವಿಚಾರಣೆ ಮಾಡಿದಾಗ ಡಾ. ಸಚಿನ ಶಿರಗಾವಿ ಅವರು ತಮ್ಮ ಅಪರಾಧವನ್ನು ಒಪ್ಪಿಕೊಂಡು, ತಾವು ಝವರ್ ಅವರನ್ನು ಯೋಗಿಕೊಳ್ಳದಲ್ಲಿ ಕೊಲೆ ಮಾಡಿರುವುದಾಗಿ ಮಾಹಿತಿ ನೀಡಿದ್ದಾರೆ.
ಈ ಕುರಿತು “ಸಮದರ್ಶಿ” ಯೊಂದಿಗೆ ಮಾತನಾಡಿದ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠರಾದ ಸಂಜೀವ ಪಾಟೀಲ ಅವರು, “ಬಂಗಾರದ ವ್ಯಾಪಾರಿ ರಾಜು ಝವರ್ ಅವರನ್ನು ಹತ್ಯೆ ಮಾಡಿ ಕೆನಾಲ್ ನಲ್ಲಿ ದೇಹ ಎಸೆಯಲಾಗಿದೆ ಎಂದು ಡಾ. ಶಿರಗಾವಿ ತಿಳಿಸಿದ್ದಾರೆ. ಆದರೆ ಅವರು ಪತ್ತೆಯಾಗುವ ವರೆಗೂ ಅವರು ‘ಇನ್ನಿಲ್ಲ’ ವೆಂದು ಹೇಳಲು ಆಸ್ಪದವಿಲ್ಲ. ಅವರ ಶೋಧ ಕಾರ್ಯ ಮುಂದುವರೆದಿದೆ” ಎಂದು ಹೇಳಿದರು.