ಬೆಳಗಾವಿ, ಡಿ. 7- ಕರ್ನಾಟಕ-ಮಹಾರಾಷ್ಟ್ರ ಗಡಿವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರಕಾರವು ತಕ್ಷಣ ಇಬ್ಬರು ಗಡಿ ಉಸ್ತುವಾರಿ ಸಚಿವರನ್ನು ನೇಮಿಸಬೇಕೆಂದು ಒತ್ತಾಯಿಸುವ ನಿರ್ಣಯವನ್ನು ಬೆಳಗಾವಿ ದಿನಪತ್ರಿಕೆಗಳ ಸಂಪಾದಕರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಕನ್ನಡ ಸಾಹಿತಿಗಳು, ಬೆಳಗಾವಿ ದಿನಪತ್ರಿಕೆಗಳ ಸಂಪಾದಕರು ಮತ್ತು ಕನ್ನಡ ಹೋರಾಟಗಾರರ ಸಭೆಯಲ್ಲಿ ಕೈಗೊಳ್ಳಲಾಯಿತು.
ಗಡಿವಿವಾದಕ್ಕೆ ಸಂಬಂಧಿಸಿದ ವಿಚಾರಗಳ ಕುರಿತು ಉಸ್ತುವಾರಿ ನೋಡಿಕೊಳ್ಳಲು ಮತ್ತು ತಾತ್ಕಾಲಿನ ಸೂಕ್ತ ನಿರ್ಣಯಗಳನ್ನು ಕೈಗೊಳ್ಳಲು ಮಹಾರಾಷ್ಟ್ರ ಸರಕಾರವು ಇಬ್ಬರು ಸಚಿವರನ್ನು ನೇಮಕ ಮಾಡಿ ತನ್ನ ಬದ್ಧತೆಯನ್ನು ಮೆರೆದಿದೆ. ಆದರೆ ಕರ್ನಾಟಕ ಸರಕಾರ ಮಾತ್ರ ಈ ವರೆಗೆ ಕೈಕಟ್ಟಿ ಕುಳಿತು ತನ್ನ ನಿರಾಸಕ್ತಿಯನ್ನು ಪ್ರದರ್ಶಿಸಿದೆ. ಇದನ್ನು ಸಭೆ ತೀವ್ರವಾಗಿ ಖಂಡಿಸಿದ್ದು ಮತ್ತು ತಕ್ಷಣ ಗಡಿ ಉಸ್ತುವಾರಿಗಾಗಿಯೇ ಇಬ್ಬರು ಸಚಿವರನ್ನು ನೇಮಿಸಬೇಕು, ಸುಪ್ರೀಮ ಕೋರ್ಟ ಮತ್ತು ಕೇಂದ್ರ ಸರ್ಕಾರದ ಎದುರು ಮಹಾರಾಷ್ಟ್ರದ ಮುಖವಾಡವನ್ನು ಬಯಲು ಮಾಡಬೇಕು ಎಂದು ಸಭೆಯು ಆಗ್ರಹಿಸಿತು.
ಗಡಿಭಾಗದಲ್ಲಿ ತ್ವೇಷಮಯ ವಾತಾವರಣ ನಿರ್ಮಾಣವಾಗುತ್ತಿದ್ದರೂ ಈ ಭಾಗದ, ಈ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಜಾಣ ಮೌನ ವಹಿಸಿದ್ದಾರೆ. ಇಂಥ ತ್ವೇಷಮಯ ವಾತಾವರಣದಲ್ಲಿ ಬೆಳಗಾವಿಯ ಉಸ್ತುವಾರಿ ಸಚಿವರಂತೂ ಕಾಣೆಯಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು. ಗಡಿಭಾಗದ ಜನರ ವಿರೋಧ ವ್ಯಕ್ತವಾಗುವ ಮುನ್ನ ಎಚ್ಚೆತ್ತುಕೊಳ್ಳಬೇಕು, ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಯಿತು.
ಕರ್ನಾಟಕದಲ್ಲಿರುವ ಮರಾಠಿ ಭಾಷಿಕರಿಗೆ ಯಾವುದೇ ರೀತಿಯ ಅನ್ಯಾಯವಾಗಿಲ್ಲ. ಕರ್ನಾಟಕದ ಕನ್ನಡಿಗರಿಗೆ ಇರುವ ಎಲ್ಲ ರೀತಿಯ ಸೌಲಭ್ಯಗಳು ಮರಾಠಿ ಭಾಷಿಕರಿಗೂ ಇವೆ. ಈ ವಿಚಾರದಲ್ಲಿ ಭೇದಭಾವವಾಗಿಲ್ಲ. ಅದು ಮರಾಠಿ ಶಾಲೆಗಳಾಗಿರಬಹುದು ಅಥವಾ ಮೂಲ ಸೌಕರ್ಯವಾಗಿರಬಹುದು. ಸಾಲದ್ದಕ್ಕೆ ಮರಾಠಿಗರ ಅಭಿವೃದ್ಧಿಗಾಗಿ ಮರಾಠಿ ಅಭಿವೃದ್ಧಿ ನಿಗಮ ಸ್ಥಾಪಿಸಿ ವಿಶೇಷ ಅನುದಾನವನ್ನು ಸಹ ಕರ್ನಾಟಕ ಸರಕಾರ ನೀಡಿದೆ. ಹೀಗಿರುವಲ್ಲಿ ಮರಾಠಿ ಭಾಷಿಕರಿಗೆ ಅನ್ಯಾಯವಾಗಿದೆ ಎಂದು ದೂರುವ ಮಹಾರಾಷ್ಟ್ರದ ಕೆಲ ನಾಯಕರು ವಾಸ್ತವ ಪರಿಸ್ಥಿಯನ್ನು ಅರಿತು ಮಾತನಾಡಬೇಕು. ಅನಗತ್ಯವಾಗಿ ಪ್ರಚೋದನಾತ್ಮಕ ಹೇಳಿಕೆ ನೀಡಿ ಇಲ್ಲಿನ ಸಾಮರಸ್ಯದ ವಾತಾವರಣವನ್ನು ಹಾಳು ಮಾಡಬಾರದು, ಅಷ್ಟಕ್ಕೂ ಬೆಳಗಾವಿ ಮರಾಠಿಗರಿಗಾಗಿ ಮಹಾರಾಷ್ಟ್ರ ಮಾಡಿದ್ದಾದರೂ ಏನು? ಕೇವಲ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ತಪ್ಪು ಹೇಳಿಕೆ ನೀಡಿ ಸಮಾಜವನ್ನು ದಾರಿ ತಪ್ಪಿಸುತ್ತಿದ್ದಾರೆ. ಮೂಲಭೂತ ಸೌಲಭ್ಯಗನ್ನು ಒದಗಿಸಿ ಎಂದು ಮಹಾರಾಷ್ಟ್ರದಲ್ಲಿನ ಕನ್ನಡಿಗರೇ ಹೆಚ್ಚಿರುವ ಪ್ರದೇಶಗಳಲ್ಲಿಯ ಜನರು ದಶಕಗಳಿಂದ ಗೋಗರಿಯುತ್ತಿದ್ದಾರೆ. ಆ ಅನ್ಯಾಯವನ್ನು ಮೊದಲು ಅವರು ಸರಿಪಡಿಸಲಿ ಎಂದು ಸಭೆ ಅಸಮಾಧಾನ ವ್ಯಕ್ತಪಡಿಸಿತು.
ಸರ್ಕಾರಗಳಿಗೆ ಗಂಡಾಂತರ ಬಂದಾಗ ಜನರ ಗಮನ ಬೇರೆಡೆ ಸೆಳೆಯಲು ಗಡಿ ವಿಷಯದಂಥ ಆಟ ಆಡಲಾಗುತ್ತದೆ. ಜನರ ಗಮನ ಸೆಳೆಯುವ ಕುತಂತ್ರ ಮಹಾರಾಷ್ಟ್ರದ್ದಾಗಿದೆ. ಕನ್ನಡತಿ ಕೆಳದಿ ಚನ್ನಮ್ಮ ಕಷ್ಟಕಾಲದಲ್ಲಿ ಶಿವಾಜಿಯ ಮಗನಿಗೆ ಆಶ್ರಯ ನೀಡಿದ್ದು ಇತಿಹಾಸದಿಂದ ತಿಳಿದು ಬರುತ್ತದೆ. ಕಿತ್ತೂರು ಚನ್ನಮ್ಮ, ಬೆಳವಡಿ ಮಲ್ಲಮ್ಮ, ಛತ್ರಪತಿ ಶಿವಾಜಿ ಇವರುಗಳ ಕಾಲದಿಂದಲೂ ಕನ್ನಡ ಮತ್ತು ಮರಾಠಿ ಭಾಷಿಕರ ಬಾಂಧವ್ಯ ಮತ್ತು ಸಾಮರಸ್ಯ ಜೀವನ ಅತ್ಯುತ್ತಮವಾಗಿ ಇದೆ. ಅದನ್ನು ಹಾಳು ಮಾಡುವ ಕೆಲಸವಾಗಬಾರದು. ಇದರಿಂದಾಗಿ ಈ ಭಾಗದ ಅಭಿವೃದ್ಧಿ ಕುಂಠಿತವಾಗುತ್ತಿದೆ. ಸಾಮಾನ್ಯ ಜನರ ಜೀವನ ಪದೇ ಪದೇ ಅಸ್ತವ್ಯಸ್ತವಾಗುತ್ತಿದೆ ಎಂದು ಸಭೆಯಲ್ಲಿ ವಿಷಾದ ವ್ಯಕ್ತಪಡಿಸಲಾಯಿತು.
ಭಾಷೆ ಅತೀ ಸೂಕ್ಷ್ಮ ವಿಷಯವಾಗಿದೆ, ಆ ಭಾಷೆಯನ್ನು ನಾವು ಕನ್ನಡಿಗರು ಅಲಕ್ಷ ಮಾಡಿದರೆ ನಮ್ಮ ಭೂಮಿಗೆ ಕುತ್ತು ಬರುತ್ತದೆ. ನಮ್ಮ ಹಿರಿಯರು ಕಾವೇರಿಯಿಂದ ಗೋದಾವರಿ ವರೆಗೆ ಬೆಳೆಸಿದ್ದ ನಾಡನ್ನು ನಮ್ಮ ದಿವ್ಯ ನಿರ್ಲಕ್ಷ್ಯದ ಕಾರಣ ಕಳೆದುಕೊಂಡಿದ್ದೇವೆ. ಈಗ ಬೆಳಗಾವಿ ವರೆಗೆ ನಮ್ಮ ಭೂಮಿಯನ್ನು ಕಸಿಯಲು ಪ್ರಯತ್ನಿಸಲಾಗುತ್ತಿದೆ. ಇನ್ನು ಮುಂದೆ ನಮ್ಮವರು ಇದನ್ನು ನಿರ್ಲಕ್ಷ್ಯ ಮಾಡಬಾರದು. ಕನ್ನಡಿಗರು ಸದಾ ಶಾಂತಿ ಬಯಸುವವರು. ನಮ್ಮ ಹೋರಾಟ ಶಾಂತಿಯುತವಾಗಿರಲಿ ಎಂದು ಮನವಿ ಮಾಡಿದರು.
ಬೆಳಗಾವಿಯಲ್ಲಿ ಅಧಿವೇಶನ ನಡೆದಾಗಲೆಲ್ಲ ಕೆಲ ಮರಾಠಿಗರು ಈ ವಿಷಯದಲ್ಲಿ ಗದ್ದಲ ಎಬ್ಬಿಸುತ್ತಾರೆ. ಮಹಾರಾಷ್ಟ್ರ ನಾಯಕರ ಪ್ರಚೋದನಾತ್ಮಕ ಹೇಳಿಕೆ ನೀಡಿದಾಗ ಅನಿವಾರ್ಯವಾಗಿ ಅದಕ್ಕೆ ನಾವು ಉತ್ತರ ನೀಡಲೇ ಬೇಕಾಗುತ್ತದೆ. ಆಗ ಸಹಜವಾಗಿಯೇ ಘರ್ಷಣೆ ಆರಂಭವಾಗುತ್ತದೆ. ಈ ವಿವಾದಕ್ಕೆ ಶಾಶ್ವತ ಪರಿಹಾರವನ್ನು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಕೈಗೊಳ್ಳಬೇಕು. ಕರ್ನಾಟಕದಲ್ಲಿನ ಮರಾಠಿಗರಿಗೆ ನೀಡಲಾಗುತ್ತಿರುವ ಸಕಲ ಸೌಕರ್ಯ ಸೌಲಭ್ಯಗಳು ಮಹಾರಾಷ್ಟ್ರದಲ್ಲಿನ ಎಲ್ಲ ಕನ್ನಡಿಗರಿಗೆ ಸಿಗುವಂತಾಗಲಿ, ಆ ನಿಟ್ಟಿನಲ್ಲಿ ರಾಜ್ಯ ಸರಕಾರ ತನ್ನ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕಿದೆ ಎಂದು ಸಭೆ ಆಗ್ರಹಿಸಿತು.
ಮಹಾಜನ ವರದಿ ನೀಡಿದಾಗ ಇರುವ ಸ್ಥಿತಿ ಈಗಿಲ್ಲ, ಮಹಾಜನ ವರದಿಯಿಂದ ಕರ್ನಾಟಕಕ್ಕೆ ನಷ್ಟವೇ ಹೆಚ್ಚಿದ್ದು ನಾಲ್ಕೈದು ದಶಕಗಳಿಂದ ಅಭಿವೃದ್ಧಿ ಪಡಿಸಿದ ರಾಜ್ಯದ ಪ್ರದೇಶಗಳೆಲ್ಲ ಮಹಾರಾಷ್ಟ್ರಕ್ಕೆ ಹೋಗಬೇಕಾಗುತ್ತದೆ. ಬೆಳಗಾವಿ ಸಮೀಪದ ಸಾಕಷ್ಟು ಹಳ್ಳಿಗಳು ಈಗ ಮಹಾನಗರದ ಭಾಗವೇ ಆಗಿದ್ದು ಮಹಾಜನ ವರದಿ ಈಗ ನಮಗೆ ಬೇಡ, ಈಗಿರುವ ಸ್ಥಿತಿಯೇ ಮುಂದುವರಿಯಲಿ ಎಂದು ಆಗ್ರಹಿಸಲಾಯಿತು.
ವಾಸ್ತವಿಕವಾಗಿ ಒಂದಿಂಚೂ ಭೂಮಿ ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ ಹೋಗುವುದು ಸಾಧ್ಯವಿಲ್ಲದ ಮಾತು. ಇಲ್ಲಿರುವ ಕನ್ನಡ ಮತ್ತು ಮರಾಠಿ ಜನರ ನಡುವೆ ಯಾವುದೇ ದ್ವೇಷವಿಲ್ಲ. ಇದು ಕೇವಲ ರಾಜಕೀಯ ಗುದ್ದಾಟವಾಗಿದೆ. ಕೇವಲ ರಾಜಕಾರಣಕ್ಕಾಗಿ ಇದೆಲ್ಲ ನಡೆದಿದ್ದು ಯಾವುದೇ ಕಾರಣಕ್ಕೂ ಗಡಿ ಭಾಗದಲ್ಲಿ ಶಾಂತಿ ಕಾಪಾಡಬೇಕು, ಸಾಮರಸ್ಯ ಜೀವನಕ್ಕೆ ಧಕ್ಕೆಯಾಗಬಾರದು. ಈ ನಿಟ್ಟಿನಲ್ಲಿ ಸರಕಾರ ದಿಟ್ಟ ನಿಲುವನ್ನು ಮತ್ತು ತನ್ನ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು ಎಂದು ಸಭೆಯು ಅಭಿಪ್ರಾಯಪಟ್ಟಿತು.
ಸಂಪಾದಕರ ಸಂಘದ ಅಧ್ಯಕ್ಷ ಮುರುಗೇಶ ಶಿವಪೂಜಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಿರಿಯ ಸಾಹಿತಿಗಳಾದ ಬಿ.ಎಸ್.ಗವಿಮಠ, ಎಂ.ಎಸ್.ಇಂಚಲ, ಶ್ರೀಮತಿ ನೀಲಗಂಗಾ ಚರಂತಿಮಠ, ಯ.ರು.ಪಾಟೀಲ, ಬಸವರಾಜ ಗಾರ್ಗಿ, ಕನ್ನಡ ಹೋರಾಟಗಾರರಾದ ಮಹಾಂತೇಶ ರಣಗಟ್ಟಿಮಠ, ಮಹಾದೇವ ತಳವಾರ, ಪದ್ಮರಾಜ ವೈಜನ್ನವರ, ಶ್ರೀಮತಿ ಕಸ್ತೂರಿ ಬಾವಿ, ಸಂಪಾದಕರುಗಳಾದ ಎಸ್.ಬಿ.ಧಾರವಾಡಕರ, ಎ.ಬಿ.ಧಾರವಾಡಕರ, ಸಂಪತ್ತಕುಮಾರ ಮುಚಳಂಬಿ, ಕುಂತಿನಾಥ ಕಲಮನಿ, ಸತೀಶ ಗುಡಗನಟ್ಟಿ, ಶಿವರಾಯ ಏಳುಕೋಟಿ, ಹಿರೋಜಿ ಮಾವರಕರ, ಜಕಿಅಹಮ್ಮದ, ಮಲ್ಲಿಕಾರ್ಜುನ ಹೆಗ್ಗನಾಯಿಕ, ಶ್ರೀನಿವಾಸ ಮಾವರಕರ, ಕನ್ನಡ ಹೋರಾಟಗಾರ ಮನೋಹರ ಪಾಯಕ್ಕನವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.