ಬೆಂಗಳೂರು: ಮಕ್ಕಳ ಸಂಖ್ಯೆ ಹೆಚ್ಚಾಗಿರುವ ಶಾಲೆಗಳಲ್ಲಿ, ಒಂದೇ ಅಡುಗೆ ಮನೆ ಇರುವ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟದ ಸಮಯದಲ್ಲಿ ಬದಲಾವಣೆ ಮಾಡಿಕೊಳ್ಳುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ದೊಡ್ಡ ಮಕ್ಕಳೊಂದಿಗೆ ಚಿಕ್ಕ ಮಕ್ಕಳನ್ನು ಒಟ್ಟಿಗೆ ನಿಲ್ಲಿಸಿ ಆಹಾರ ವಿತರಿಸುವುದು ಮತ್ತು ಕಡಿಮೆ ಸಮಯದಲ್ಲಿ ಊಟ ನೀಡುವುದು, ತಟ್ಟೆ -ಲೋಟ ತೊಳೆಯುವಾಗ ನೂಕು ನುಗ್ಗಲು ಉಂಟಾಗುತ್ತದೆ. ಇದನ್ನು ತಡೆಯುವ ಉದ್ದೇಶದಿಂದ ಬಿಸಿಯೂಟ ಸಮಯದಲ್ಲಿ ಬದಲಾವಣೆ ಮಾಡಿಕೊಳ್ಳಲು ತಿಳಿಸಲಾಗಿದೆ.
ಒಂದರಿಂದ ಐದನೇ ತರಗತಿ ಮಕ್ಕಳಿಗೆ ಮಧ್ಯಾಹ್ನ 1 ಗಂಟೆಯಿಂದ 1.45 ರವರೆಗೆ, 6 ರಿಂದ 10ನೇ ತರಗತಿಯ ಮಕ್ಕಳಿಗೆ ಮಧ್ಯಾಹ್ನ 2 ಗಂಟೆಯಿಂದ 2.40 ರವರೆಗೆ ಪ್ರತ್ಯೇಕ ಸಮಯದಲ್ಲಿ ಬಿಸಿಯೂಟ ವಿತರಿಸಲು ತಿಳಿಸಲಾಗಿದೆ. ಶಾಲಾ ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿ ಚರ್ಚಿಸಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಮೌಲ್ಯಮಾಪನ ಪ್ರಾಧಿಕಾರ ಮತ್ತು ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯ ವತಿಯಿಂದ ಶಾಲೆಗಳಲ್ಲಿ ಮಧ್ಯಾಹ್ನ ಉಪಹಾರ ಯೋಜನೆ ಮತ್ತು ಕ್ಷೀರಭಾಗ್ಯ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಮಾಡಿರುವ ವಿವಿಧ ಶಿಫಾರಸುಗಳಲ್ಲಿ ಈ ಅಂಶವನ್ನು ಸೇರ್ಪಡೆ ಮಾಡಲಾಗಿದೆ. ಬಿಸಿಯೂಟದ ಗುಣಮಟ್ಟ, ಪ್ರಮಾಣ, ಪೌಷ್ಟಿಕತೆ, ಸ್ವಚ್ಛತೆ, ಸುರಕ್ಷತೆ, ಕೊಂದು ಕೊರತೆಗಳ ಬಗ್ಗೆ ಗಮನಹರಿಸಲು ತಿಳಿಸಲಾಗಿದೆ.