ದಾವಣಗೆರೆ: ಒಂದೇ ಗ್ರಾಮದಲ್ಲಿ ಒಂದೇ ದಿನ ವಿವಿಧ ಕಾರಣದಿಂದ ಎಂಟು ಜನರು ಸಾವನ್ನಪ್ಪಿದ್ದರಿಂದ ಅಂತ್ಯಸಂಸ್ಕಾರಕ್ಕೆ ಹೂಳಲು ಜಾಗವಿಲ್ಲದ ಕಾರಣಕ್ಕೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ದಾವಣಗೆರೆಯ ಹೊರ ವಲಯದ ಹೊಸ ಕುಂದುವಾಡದಲ್ಲಿ ಗುರುವಾರ ಒಂದೇ ದಿನ 8 ಜನ ಸಾವನ್ನಪ್ಪಿದ್ದಾರೆ. 3,000 ಜನಸಂಖ್ಯೆ ಹೊಂದಿರುವ ಹೊಸ ಕುಂದುವಾಡ ಗ್ರಾಮದಲ್ಲಿ ಒಂದೇ ದಿನ ಎಂಟು ಜನರು ಮೃತಪಟ್ಟಿದ್ದಾರೆ.
ಮಾರಜ್ಜಿ (60) ಎಂಬುವರು ವಯೋಸಹಜ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ಸಂತೋಷ್ (32) ಎಂಬಾತ ವಾಂತಿ ಭೇದಿಯಿಂದ, ಈರಮ್ಮ (65) ಜ್ವರದಿಂದ, ಭೀಮಕ್ಕ (60) ವಾಂತಿ ಭೇದಿಯಿಂದ, ಸುನೀಲ (25) ಜ್ವರದಿಂದ, ಶಾಂತಮ್ಮ (65) ವಯೋಸಹಜ ಹಾಗೂ 3 ದಿನದ ಗಂಡು ಮಗು ಉಸಿರಾಟದ ತೊಂದರೆಯಿಂದ ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಶವಸಂಸ್ಕಾರ ಮಾಡಲು ಸ್ಮಶಾನ ಇಲ್ಲದೆ ಪರದಾಡುತ್ತಿರುವ ಗ್ರಾಮಸ್ಥರು ಸ್ಮಶಾನಕ್ಕಾಗಿ ಆಗ್ರಹಿಸಿ ಹೊಸ ಕುಂದವಾಡದಲ್ಲಿ ಪ್ರತಿಭಟನೆ ನಡೆಸಿದರು. ಈ ಹಿಂದೆ ಸ್ಮಶಾನಕ್ಕಾಗಿ ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿದರು ಸಹ ಯಾವುದೇ ಪ್ರಯೋಜನವಾಗಿಲ್ಲ. ಅದ್ದರಿಂದ ಸ್ಮಶಾನಕ್ಕಾಗಿ ಗ್ರಹಿಸಿದ ಇಡೀ ಗ್ರಾಮದ ಜನರಿಂದ ಪ್ರತಿಭಟನೆ ನಡೆಸಿದರು.