ಬಾಗಲಕೋಟ: ಸಚಿವ ಸ್ಥಾನ ಕೊಡದ ಕಾರಣ ನಾನು ಅಧಿವೇಶನಕ್ಕೆ ಹೋಗುವುದಿಲ್ಲ ಎಂದು ಶೇಕಡಾ ೪೦% ಕಮೀಷನ್ ತೆಗೆದುಕೊಳ್ಳುವ ಆರೋಪದಲ್ಲಿ ಮಂತ್ರಿ ಸ್ಥಾನ ಕಳೆದುಕೊಂಡಿರುವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬೆಳಗಾವಿಗೆ ಹೋಗುತ್ತೇನೆ. ಆದರೆ ಅಧಿವೇಶನಕ್ಕೆ ಹೋಗುವುದಿಲ್ಲ. ನಾನು ಸದನಕ್ಕೆ ಹಾಜರಾಗುವುದಿಲ್ಲ ಅಂತಾ ಸಭಾಧ್ಯಕ್ಷರಿಂದ ಅನುಮತಿ ಪಡೆಯಲು ಬೆಳಗಾವಿಗೆ ಹೋಗುತ್ತಿದ್ದೇನೆ ಎಂದರು.
ಅಪರಾಧದಿಂದ ಮುಕ್ತರಾದವರಿಗೆ ಯಾವ ಕಾರಣಕ್ಕೂ ಶಿಕ್ಷೆ ಆಗುವುದಿಲ್ಲ ಎಂದು ಸ್ನೇಹಿತರೊಬ್ಬರು ಹೇಳಿದ್ದರು. ನನ್ನ ವಿಚಾರದಲ್ಲಿ ತೀರ್ಪು ಬಂದಿದೆ, ಕ್ಲೀನಚಿಟ್ ಕೂಡಾ ಬಂದಿದೆ. ಇವತ್ತು, ನಾಳೆ ನಿಮ್ಮನ್ನು ಮಂತ್ರಿ ಮಾಡುತ್ತೇವೆ ಎಂದು ಬೊಮ್ಮಾಯಿ ತಿಳಿಸುತ್ತಾ ಬಂದಿದ್ದಾರೆ. ನಿಮ್ಮಂತವರು ಸಚಿವ ಸಂಪುಟದಲ್ಲಿ ಇರಬೇಕೆಂದೂ ಸಹ ಹೇಳುತ್ತಾ ಇದ್ದಾರೆ. ಆದರೆ ಯಾಕೆ ಸಂಪುಟಕ್ಕೆ ತಗೆದುಕೊಳ್ಳಲಿಲ್ಲ ನನಗೆ ಗೊತ್ತಿಲ್ಲ ಎಂದು ಈಶ್ವರಪ್ಪ ಹೇಳಿದರು.
ಇಡೀ ಕರ್ನಾಟಕದಿಂದ ನನಗೆ ಫೋನ್ ಮಾಡುತ್ತಿದ್ದಾರೆ. ಯಾಕೆ ನಿಮ್ಮನ್ನು ಸಂಪುಟಕ್ಕೆ ತಗೊಂಡಿಲ್ಲ ಅಂತ ಪ್ರಶ್ನಿಸ್ತಿದಾರೆ. ನಮಗೆಲ್ಲ ತುಂಬಾ ನೋವಾಗಿದೆ ಅಂತಾ ಹೇಳುತ್ತಿರುವುದರಿಂದ ನನಗೂ ನೋವಾಗುತ್ತಿದೆ, ಅಪಮಾನವಾಗುತ್ತಿದೆ. ಇದನ್ನು ಅರ್ಥ ಮಾಡಿಸಬೇಕು ಎಂಬ ಉದ್ದೇಶದಿಂದ ಇವತ್ತು ನಾನು ಒಂದು ರೀತಿಯ ಸೌಜನ್ಯ ಪ್ರತಿಭಟನೆ ಮಾಡುತ್ತಿದ್ದೇನೆ ಎಂದರು.
ನನ್ನನ್ನು ಪಕ್ಷದಲ್ಲಿ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎನ್ನುವ ಪ್ರಶ್ನೆ ಬರುವುದಿಲ್ಲ. ನನಗೇನು ವಯಸ್ಸಾಗಿದೆಯಾ? ಇದನ್ನು ತೀರ್ಮಾನ ಮಾಡುವುದು ಮುಖ್ಯಮಂತ್ರಿ ಅಲ್ಲ. ಟಿಕೆಟ್ ಕೊಡುವ ಸಂದರ್ಭದಲ್ಲಿ ಪಕ್ಷ ತೀರ್ಮಾನ ಮಾಡುವಂತದ್ದು. ಮೊನ್ನೆ ತನಕ ನಾನು ಸಂಪುಟದಲ್ಲಿ ಇದ್ದವನು. ನನ್ನ ಮೇಲೆ ಆಪಾದನೆ ಬಂದ ಮೇಲೆ ರಾಜೀನಾಮೆ ಕೊಡುತ್ತೇನೆ ಎಂದಿದ್ದೆ. ಪ್ರಾರಂಭದಲ್ಲಿ ಬೇಡ ಅಂದರು. ನಾನು ಅವರನ್ನು ಒಪ್ಪಿಸಿ ರಾಜೀನಾಮೆ ಕೊಟ್ಟಿದ್ದೆ. ಈಗ ನನಗೆ ಕ್ಲೀನಚಿಟ್ ಸಿಕ್ಕಿದೆ. ಆದರೆ, ನನ್ನನ್ನು ಮಂತ್ರಿ ಮಾಡಲು ನಮ್ಮ ಸರ್ಕಾರದ ನಾಯಕ ಬೊಮ್ಮಾಯಿಗೆ ಏನು ತೊಂದರೆ ಎಂಬುದು ನನಗೆ ಗೊತ್ತಿಲ್ಲ ಎಂದು ಹೇಳಿದರು.