ಮುಂಬೈ: ಸಂಪೂರ್ಣ ಕನ್ನಡಿಗರೇ ಇರುವ ಮಹಾರಾಷ್ಟ್ರದ ಜತ್ತ ತಾಲೂಕನ್ನು ಕರ್ನಾಟಕಕ್ಕೆ ಸೇರ್ಪಡೆ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ ಬಳಿಕ, ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ ಅವರು, ಒಂದು ಸಣ್ಣ ಹಳ್ಳಿಯನ್ನೂ ಕೂಡ ಕರ್ನಾಟಕಕ್ಕೆ ಸೇರಲು ಬಿಡುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಗಡಿ ವಿವಾದದ ಬಗ್ಗೆ ಮಾತನಾಡಿದ ಅವರು, ಮಹಾರಾಷ್ಟ್ರ ಸರ್ಕಾರ ರಾಜ್ಯದ ಸಮಗ್ರತೆಗೆ ಬದ್ಧವಾಗಿದೆ. ಇಲ್ಲಿನ ಯಾವೊಂದು ಜಾಗವೂ ಕರ್ನಾಟಕಕ್ಕೆ ಸೇರಲು ಬಿಡುವುದಿಲ್ಲ. ಮರಾಠಿ ಭಾಷಿಕರು ಇರುವ ಬೆಳಗಾವಿ ಮಾತ್ರವಲ್ಲದೇ, ಕಾರವಾರ, ನಿಪ್ಪಾಣಿಯ ಗ್ರಾಮಗಳ ಸೇರ್ಪಡೆಗೆ ನಮ್ಮ ಸರ್ಕಾರ ಹೋರಾಟ ಮಾಡಲಿದೆ ಎಂದು ಹೇಳಿದರು.
ಇತ್ತೀಚೆಗಷ್ಟೇ ಮಹಾರಾಷ್ಟ್ರ ಸರ್ಕಾರ ಕರ್ನಾಟಕದಲ್ಲಿರುವ ಮರಾಠಿ ಹೋರಾಟಗಾರರಿಗೆ ಪಿಂಚಣಿ, ಆರೋಗ್ಯ ವಿಮೆಯನ್ನು ನೀಡುವುದಾಗಿ ಘೋಷಿಸಿತ್ತು. ಇದರಿಂದ ಕೆರಳಿದ ಕರ್ನಾಟಕ ಸರ್ಕಾರ ಕೂಡ ಮಹಾರಾಷ್ಟ್ರದಲ್ಲಿನ ಕನ್ನಡ ಶಾಲೆಗಳ ಅಭಿವೃದ್ಧಿಗೆ ವಿಶೇಷ ನೆರವು, ಆ ರಾಜ್ಯದ ಕನ್ನಡ ಹೋರಾಟಗಾರರಿಗೆ ಪಿಂಚಣಿ ನೀಡುವುದಾಗಿ ಘೋಷಿಸಿದೆ.
ಅದರಂತೆ ಕನ್ನಡ ಮಾತನಾಡುವ ಹೆಚ್ಚು ಜನರಿರುವ ಮಹಾರಾಷ್ಟ್ರದ ಜತ್ತ ತಾಲೂಕನ್ನು ರಾಜ್ಯಕ್ಕೆ ಸೇರ್ಪಡೆ ಮಾಡುವ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಸರ್ಕಾರ ಹೇಳಿದೆ.