ಬೆಳಗಾವಿ, ಫೆ.13 : ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಗೆ ಹಂಚಿಕೆಯಾಗಿರುವ ಎಲೆಕ್ಟ್ರಾನಿಕ್ ಮತಯಂತ್ರಗಳ(ಇವಿಎಂ) ಪ್ರಥಮ ಹಂತದ ಪರಿಶೀಲನಾಕಾರ್ಯ ಭಾರತ ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.
ಇಲ್ಲಿನ ಹಿಂಡಲಗಾ ಗ್ರಾಮದಲ್ಲಿರುವ ಭಾರತ ಚುನಾವಣಾ ಆಯೋಗದ ಮತಯಂತ್ರಗಳ ಉಗ್ರಾಣದಲ್ಲಿ ಸೋಮವಾರ ಆರಂಭಿಸಲಾಗಿರುವ ಪ್ರಥಮ ಹಂತದ ಪರಿಶೀಲನಾ (ಎಫ್.ಎಲ್.ಸಿ) ಕಾರ್ಯವನ್ನು ವೀಕ್ಷಿಸಿದ ಬಳಿಕ ಈ ವಿಷಯ ತಿಳಿಸಿದರು.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಳಕೆಗಾಗಿ ಜಿಲ್ಲೆಗೆ ನೀಡಲಾಗಿರುವ ಮತ ಯಂತ್ರಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ ಬಳಿಕವೇ ಅವುಗಳನ್ನು ಬಳಕೆಗೆ ಖಾತ್ರಿಪಡಿಸಲಾಗುತ್ತದೆ.
ಜಿಲ್ಲೆಯ ಒಟ್ಟು 18 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದಿಂದ ಒಟ್ಟಾರೆ 8748 ಬ್ಯಾಲೆಟ್ ಯುನಿಟ್; 7216 ಕಂಟ್ರೋಲ್ ಯುನಿಟ್ ಹಾಗೂ 6319 ವಿವಿಪ್ಯಾಟ್ ಯಂತ್ರಗಳನ್ನು ಒದಗಿಸಲಾಗಿರುತ್ತದೆ ಎಂದು ತಿಳಿಸಿದರು.
ಇವಿಎಂ ಪರಿಶೀಲನೆ ಪಾರದರ್ಶಕ:
ಮತಯಂತ್ರಗಳ ಪ್ರಥಮಹಂತದ ಪರಿಶೀಲನಾಕಾರ್ಯವನ್ನು ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ರಾಷ್ಟ್ರೀಯ ಹಾಗೂ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಅತ್ಯಂತ ಪಾರದರ್ಶಕವಾಗಿ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಇಂದಿನಿಂದ ಪರಿಶೀಲನಾ ಕಾರ್ಯ ಆರಂಭಗೊಂಡಿರುತ್ತದೆ. ಚುನಾವಣಾ ಆಯೋಗವೇ ನಿಯೋಜಿಸಿರುವ ಎಲೆಕ್ಟ್ರಾನಿಕ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಇಸಿಐಎಲ್)ನ ನುರಿತ 30 ಎಂಜಿನಿಯರ್ ಗಳು ಪ್ರತಿಯೊಂದು ಮತಯಂತ್ರಗಳನ್ನು ನಿಯಮಾನುಸಾರ ಜೋಡಿಸಿ ಅವುಗಳ ಕಾರ್ಯಕ್ಷಮತೆಯನ್ನು ಖಾತ್ರಿಪಡಿಸಲಾಗುತ್ತದೆ ಎಂದು ತಿಳಿಸಿದರು.
ಪ್ರತಿದಿನ ಬೆಳಿಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಪ್ರಥಮ ಹಂತದ ಪರಿಶೀಲನಾ ಕಾರ್ಯ ನಡೆಯುತ್ತದೆ. ರಾಷ್ಟ್ರೀಯ ಹಾಗೂ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಪರಿಶೀಲನಾ ಕಾರ್ಯವನ್ನು ವೀಕ್ಷಿಸಬಹುದಾಗಿದೆ ಎಂದು ನಿತೇಶ ಪಾಟೀಲ ಅವರು ತಿಳಿಸಿದರು.
ಪರಿಶೀಲನಾ ಕಾರ್ಯವು ಪಾರದರ್ಶಕವಾಗಿ ನಡೆಸಲು ಅನುಕೂಲವಾಗುವಂತೆ ವೆಬ್ ಕ್ಯಾಸ್ಟಿಂಗ್ ಕೂಡ ಮಾಡಲಾಗುತ್ತಿದ್ದು. ಎಲ್ಲಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು, ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿರುತ್ತದೆ. ಅಗತ್ಯ ಗುರುತಿನ ಚೀಟಿ ಹೊಂದಿರುವ ಅಧಿಕೃತ ವ್ಯಕ್ತಿಗಳಿಗೆ ಮಾತ್ರ ಪ್ರವೇಶವನ್ನು ಕಲ್ಪಿಸಲಾಗುತ್ತಿದೆ ಎಂದರು.
ಜಿಲ್ಲೆಗೆ ಹಂಚಿಕೆಯಾಗಿರುವ ಪ್ರತಿಯೊಂದು ಮತಯಂತ್ರವನ್ನು ಇ.ಎಂ.ಎಸ್. ಸಾಫ್ಟ್‌ವೇರ್ ಮೂಲಕ ಸ್ಕ್ಯಾನ್ ಮಾಡಿ ಬ್ಯಾಲೆಟ್ ಯುನಿಟ್, ಕಂಟ್ರೋಲ್ ಯುನಿಟ್ ಹಾಗೂ ವಿವಿಪ್ಯಾಟ್ ಯಂತ್ರಗಳನ್ನು ಜೋಡಿಸಿ ಅವುಗಳನ್ನು ಯು.ಎ.ಟಿ. ಅಂದರೆ ಯೂಸರ್ ಅಕ್ಸೆಪ್ಟೆನ್ಸ್ ಟೆಸ್ಟ್ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಹೈದರಾಬಾದನಿಂದ ಮತಯಂತ್ರಗಳನ್ನು ಸುರಕ್ಷಿತವಾಗಿ ತಂದು ಹಿಂಡಲಗಾ ಗ್ರಾಮದ ಉಗ್ರಾಣದಲ್ಲಿ ಸಂರಕ್ಷಿಸಿ ಇಡಲಾಗಿದ್ದು, ಹದಿನೈದು ದಿನಗಳ ಕಾಲ ಪ್ರಥಮ ಹಂತದ ಪರಿಶೀಲನೆ ನಡೆಯಲಿದೆ ಎಂದು ಇವಿಎಂ ನೋಡಲ್ ಅಧಿಕಾರಿ ಮೋಹನ ಶಿವಣ್ಣನವರ ಹೇಳಿದರು.
ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ, ಚಿಕ್ಕೋಡಿ ಉಪ ವಿಭಾಗಾಧಿಕಾರಿ ಮಾಧವ ಗಿತ್ತೆ, ಬೆಳಗಾವಿ ಉಪ ವಿಭಾಗಾಧಿಕಾರಿ ಬಲರಾಮ ಚವಾಣ, ವಿವಿಧ ಕ್ಷೇತ್ರಗಳ ಚುನಾವಣಾಧಿಕಾರಿಗಳಾದ ಗೀತಾ ಕೌಲಗಿ, ಸತೀಶ ಕುಮಾರ, ಡಾ.ರಾಜೀವ ಕೂಲೇರ, ಇವಿಎಂ ನೋಡಲ್ ಅಧಿಕಾರಿ ಮೋಹನ ಶಿವಣ್ಣನವರ, ಚುನಾವಣಾ ಶಾಖೆಯ ತಹಶೀಲ್ದಾರ ಸಾರಿಕಾ ಶೆಟ್ಟಿ, ಸಹಾಯಕ ಚುನಾವಣಾಧಿಕಾರಿಗಳುಮತ್ತು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.