ಇಸ್ಲಾಮಾಬಾದ: ಭ್ರಷ್ಟಾಚಾರ ಆರೋಪದಡಿ ಶನಿವಾರ ಪಾಕಿಸ್ತಾನ್ ತೆಹ್ರಿಕ್ ಎ ಇನ್ಸಾಫ್(ಪಿಟಿಐ) ಪಕ್ಷದ ಮುಖ್ಯಸ್ಥ, ಮಾಜಿ ಪ್ರಧಾನಿ ಇಮ್ರಾನ ಖಾನ್ ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆಯಾಗಿದೆ.
ಪಾಕಿಸ್ತಾನದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಇಮ್ರಾನ ಖಾನ್ ಅವರನ್ನು ತೋಷಖಾನಾ ಪ್ರಕರಣದಲ್ಲಿ ದೋಷಿ ಎಂದು ತೀರ್ಪುನೀಡಿ ಮೂರು ವರ್ಷಗಳ ಜೈಲುಶಿಕ್ಷೆ ಮತ್ತು 1 ಲಕ್ಷ ರೂಪಾಯಿ ದಂಡ ವಿಧಿಸಿದೆ. ಕೋರ್ಟ ಆದೇಶವನ್ನು ಉಲ್ಲಂಘಿಸಿದರೆ ಹೆಚ್ಚುವರಿ ಆರು ತಿಂಗಳು ಜೈಲಿನಲ್ಲಿ ಇರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಇಸ್ಲಾಮಾಬಾದ ಪೊಲೀಸರು ಇಮ್ರಾನ ಖಾನ್ ಬಂಧನಕ್ಕೆ ವಾರಂಟ್ ಹೊರಡಿಸಿದ್ದಾರೆ. ಈ ತೀರ್ಪಿನಿಂದಾಗಿ ಐದು ವರ್ಷಗಳ ಅವಧಿಗೆ ರಾಜಕೀಯದಿಂದ ಅನರ್ಹಗೊಳಿಸಲಾಗುತ್ತದೆ. ಖಾನ್ ವಿಚಾರಣೆಗೆ ಹಾಜರಾಗಿರಲಿಲ್ಲ, ಹೀಗಾಗಿ ನ್ಯಾಯಾಧೀಶರು ಅವರನ್ನು ಬಂಧಿಸಲು ಆದೇಶಿಸಿದರು. ಆದರೆ, ತಕ್ಷಣವೇ ಮೇಲ್ಮನವಿ ಸಲ್ಲಿಸುವುದಾಗಿ ಅವರ ಕಾನೂನು ತಂಡ ಹೇಳಿದೆ.
ಟಿಟಿಪಿ ಮುಖ್ಯಸ್ಥ ಇಮ್ರಾನ ಖಾನ್ ದೇಶಾದ್ಯಂತ 140 ಕ್ಕೂ ಹೆಚ್ಚು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಭಯೋತ್ಪಾದನೆ, ಹಿಂಸಾಚಾರ, ಧರ್ಮನಿಂದನೆ, ಭ್ರಷ್ಟಾಚಾರ ಮತ್ತು ಕೊಲೆಯಂತಹ ಆರೋಪಗಳನ್ನು ಎದುರಿಸುತ್ತಿದ್ದಾರೆ. ಅಕ್ಟೋಬರ 21, 2022 ರಂದು ಪಾಕಿಸ್ತಾನದ ಚುನಾವಣಾ ಆಯೋಗವು ಇಮ್ರಾನ ಖಾನ್ ಅವರನ್ನು “ಸುಳ್ಳು ಹೇಳಿಕೆಗಳು ಮತ್ತು ತಪ್ಪು ಘೋಷಣೆಗಾಗಿ” ಅನರ್ಹಗೊಳಿಸಿದ ನಂತರ ತೋಶಾಖಾನಾ ವಿಷಯವು ರಾಷ್ಟ್ರೀಯ ರಾಜಕೀಯದಲ್ಲಿ ಮುನ್ನಲೆಗೆ ಬಂತು.
ತೋಷಖಾನಾವು ಕ್ಯಾಬಿನೆಟ್ ವಿಭಾಗದ ಅಡಿಯಲ್ಲಿ ಒಂದು ಇಲಾಖೆಯಾಗಿದ್ದು, ಇದು ಆಡಳಿತಗಾರರು ಮತ್ತು ಸರ್ಕಾರಿ ಅಧಿಕಾರಿಗಳಿಗೆ ಇತರ ಸರ್ಕಾರಗಳ ಮುಖ್ಯಸ್ಥರು ಮತ್ತು ವಿದೇಶಿ ಗಣ್ಯರು ನೀಡಿದ ಉಡುಗೊರೆಗಳನ್ನು ಸಂಗ್ರಹಿಸುತ್ತದೆ. ಖಾನ್ ಅವರು ಬೆಲೆಬಾಳುವ ವಾಚ್ ಸೇರಿದಂತೆ ಕೆಲವು ಉಡುಗೊರೆಗಳನ್ನು ತೆಗೆದುಕೊಂಡು ಅವುಗಳನ್ನು ಲಾಭಕ್ಕಾಗಿ ಮಾರಾಟ ಮಾಡಿದ್ದರು ಎಂಬುದು ಆರೋಪವಾಗಿದೆ.
ಇಮ್ರಾನ ಖಾನ್ ತೋಷಖಾನಾದಿಂದ ಉಳಿಸಿಕೊಂಡ ಉಡುಗೊರೆಗಳ ವಿವರಗಳನ್ನು ಉದ್ದೇಶಪೂರ್ವಕವಾಗಿ ಮರೆಮಾಚಿದ್ದಾರೆ ಎಂದು ಇಸಿಪಿ ಸಲ್ಲಿಸಿದ ಕ್ರಿಮಿನಲ್ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿತ್ತು.