ಧಾರವಾಡ : ನಗರದ ಕೆಲಗೇರಿ ರಸ್ತೆಯಲ್ಲಿರುವ ಶಾಂತಿನಿಕೇತನ ನಗರದ ಅಧಿದೇವತೆ, ತ್ರಿಗುಣಾತ್ಮಕ ಸ್ವರೂಪಳಾದ ಜಾಗೃತಿ ಶ್ರೀ ಕರಿಯಮ್ಮದೇವಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ ಭಕ್ತಿ, ಶ್ರದ್ಧೆ ಹಾಗೂ ಸಂಭ್ರಮದಿಂದ ನಡೆಯುತ್ತಿದೆ.
ಶ್ರೀ ಕರಿಯಮ್ಮದೇವಿಗೆ ಛತ್ರಪತಿ ಶಿವಾಜಿ ಮಹಾರಾಜರೂ ಸಹ ಭಕ್ತರಾಗಿದ್ದರು. ದೇವಿಗೆ ಅನಾದಿಕಾಲದಿಂದಲೂ ರೈತರು ಶ್ರದ್ಧೆ, ಭಕ್ತಿಯಿಂದ ಪೂಜೆ ಸಲ್ಲಿಸುತ್ತ ಬಂದಿದ್ದರು. ಇದು ಭಾವೈಕ್ಯತೆಯ ಕೇಂದ್ರವೂ ಸಹ ಆಗಿದ್ದು, ರಾಜ್ಯದ ನಾನಾಭಾಗಗಳಿಂದ ಭಕ್ತರು ಆಗಮಿಸುತ್ತಾರೆ.
ದೇವಸ್ಥಾನದ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಸುಸಜ್ಜಿತ ಸಭಾಭವನ ಹಾಗೂ ಅಡುಗೆ ಕೋಣೆಯನ್ನು ನಿರ್ಮಾಣ ಮಾಡಲಾಗಿದೆ ಎಂದು ದೇವಸ್ಥಾನದ ಟ್ರಸ್ಟ್ ಸಮಿತಿಯ ಅಧ್ಯಕ್ಷ ಎನ್.ಎಚ್.ಕೋನರೆಡ್ಡಿ ತಿಳಿಸಿದ್ದಾರೆ.
ಕಳೆದ ಸೆಪ್ಟೆಂಬರ 26 ರಿಂದ ನವರಾತ್ರಿ ಉತ್ಸವವು ಬರುವ ಅಕ್ಟೋಬರ 5 ರವರೆಗೆ ನಡೆಯಲಿದೆ. ಕರಿಯಮ್ಮದೇವಿಗೆ ವಿವಿಧ ಅಲಂಕಾರಗಳನ್ನು ಮಾಡಲಾಗುತ್ತಿದ್ದು, ಪ್ರತಿದಿನ ರಾತ್ರಿ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿದೆ. ನವರಾತ್ರಿ ಉತ್ಸವದ ಕಾರ್ಯಕ್ರಮಗಳು ದಿನದಿಂದ ದಿನಕ್ಕೆ ಸಾವಿರಾರು ಭಕ್ತರ ಗಮನವನ್ನು ಸೆಳೆಯುತ್ತಿದೆ.
ಕರಿಯಮ್ಮದೇವಿಗೆ ಸೆಪ್ಟೆಂಬರ 26 ರಂದು ಶ್ರೀ ರೇಣುಕಾದೇವಿ, ಸೆಪ್ಟೆಂಬರ 27 ರಂದು ಶ್ರೀ ಅಂಬಾಭವಾನಿ, ಸೆಪ್ಟೆಂಬರ 28 ರಂದು ಶ್ರೀ ಪದ್ಮಾವತಿದೇವಿ, ಸೆಪ್ಟೆಂಬರ 29 ರಂದು ಗಾಯಿತ್ರಿದೇವಿ ಅಲಂಕಾರಗಳನ್ನು ಮಾಡಲಾಗಿತ್ತು. ಸೆಪ್ಟೆಂಬರ 30 ರಂದು ಶ್ರೀ ಮಹಾಲಕ್ಷ್ಮೀ, ಅಕ್ಟೋಬರ 01 ರಂದು ಶ್ರೀ ಶಾಖಾಂಬರಿದೇವಿ, ಅಕ್ಟೋಬರ 02 ರಂದು ಶ್ರೀ ಅನ್ನಪೂರ್ಣೇಶ್ವರಿದೇವಿ, ಅಕ್ಟೋಬರ್ 03 ರಂದು ಶ್ರೀ ಮಹಾಸರಸ್ವತಿದೇವಿ, ಅಕ್ಟೋಬರ 04 ರಂದು ಶ್ರೀ ಮಹಾಗೌರಿ ಹಾಗೂ ಅಕ್ಟೋಬರ 05 ರಂದು ಶ್ರೀ ಮಹಿಷಾಸುರ ಮರ್ದಿನಿ ಅಲಂಕಾರ ಮಾಡುವುದರ ಜೊತೆಗೆ ಅಂದು ಸಾಯಂಕಾಲ 4.30 ಗಂಟೆಗೆ ಶ್ರೀ ಕರಿಯಮ್ಮದೇವಿಯ ಅಲಂಕೃತಿ ಪಲ್ಲಕ್ಕಿ ಉತ್ಸವವು ನಡೆದು ಬನ್ನಿ ಮಂಟಪಕ್ಕೆ ತೆರಳಿ ಬನ್ನಿ ಮುಡಿಯಲಾಗುವುದು.
ಪ್ರತಿದಿನ ಬೆಳಿಗ್ಗೆ 5.30 ಕ್ಕೆ ಕಾಕಡಾರತಿ, 9.30 ಕ್ಕೆ ಮಂಗಳಾರತಿ, ಸಾಯಂಕಾಲ 6.30 ಕ್ಕೆ ಭಜನೆ, ರಾತ್ರಿ 8.30 ಕ್ಕೆ ಮಹಾಮಂಗಳಾರತಿ ಹಾಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಅಕ್ಟೋಬರ್ 2 ರಂದು ಸಾಯಂಕಾಲ 4.30 ಗಂಟೆಗೆ ಸುಮಂಗಲೆಯರಿಂದ ಕುಂಕುಮಾರ್ಚನೆ ನಡೆಯಲಿದೆ.
ಟ್ರಸ್ಟ್ ಸಮಿತಿಯ ಪದಾಧಿಕಾರಿಗಳಾದ ಶಿವಾನಂದ ಅಂಬಡಗಟ್ಟಿ, ಸಿ.ಜಿ.ಸಾಣಿಕೊಪ್ಪ, ಕೆ.ಎನ್.ಕುರಕುರಿ, ಮಹಾವೀರ ಉಪಾಧ್ಯ, ಎನ್.ಬಿ.ಅರಳಿಕಟ್ಟಿ, ಬಿ.ಟಿ.ರಡ್ಡಿ, ವಿಶ್ವನಾಥ ಯಲಿಗಾರ, ಹೇಮಾವತಿ ಬ. ಪವಾರ, ಎಸ್.ಕೆ.ಗಾಳಿ ಅವರು ನವರಾತ್ರಿ ಉತ್ಸವವನ್ನು ಯಶಸ್ವಿಯಾಗಿಸಲು ಟೊಂಕಕಟ್ಟಿ ಶ್ರಮಿಸುತ್ತಿದ್ದಾರೆ.