ಕಾರವಾರ: ತಾನು ಸೇನೆಯ ಉನ್ನತ ಅಧಿಕಾರಿ ಎಂದು ಹೇಳಿಕೊಂಡು ವಂಚಿಸುತ್ತಿದ್ದ ನಕಲಿ ಸೇನಾಧಿಕಾರಿಯನ್ನು ಕಾರವಾರ ಗ್ರಾಮೀಣ ಠಾಣಾ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಲೆಫ್ಟಿನೆಂಟ್ ಕರ್ನಲ್ ಯೂನಿಫಾರ್ಮ ಧರಿಸಿಕೊಂಡು ಓಡಾಡುತ್ತಿದ್ದ ಕಾರವಾರದ ಸಿದ್ಧರ ನಿವಾಸಿ ವಿನಾಯಕ ಮಹಾಲೆ ಬಂಧಿತ ಆರೋಪಿಯಾಗಿದ್ದಾನೆ. ಸೇನೆಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಅನೇಕರಿಂದ ಹಣ ಪಡೆದು ವಂಚನೆ ಮಾಡಿದ ಹಿನ್ನೆಲೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಸೇನಾ ಉನ್ನತಾಧಿಕಾರಿ ಸಮವಸ್ತ್ರ ಧರಿಸಿಕೊಂಡು ವಿನಾಯಕ, ಓರ್ವನಿಂದ 66,000ರೂ., ಇನ್ನೊಬ್ಬರಿಂದ 35,000 ರೂ.ನಂತೆ ಹಲವರಿಂದ ಹಣ ಪಡೆದು ವಂಚನೆ ಮಾಡಿದ್ದಾನೆ. ತಮ್ಮ ಪುತ್ರನಿಗೆ ನೇವಿಯಲ್ಲಿ ಪಿಯೋನ್ ಕೆಲಸ ಕೊಡಿಸುವುದಾಗಿ ಹೇಳಿ ಕಡವಾಡ ಮಾರುತಿ ನಗರದ ಹೇಮಲತಾ ಎಂಬವರಿಂದಲೂ ಹಣ ಪಡೆದು ಮೋಸ ಮಾಡಿದ್ದಾನೆ. ಈ ಬಗ್ಗೆ ಹೇಮಲತಾ ಅವರು ಠಾಣೆಗೆ ದೂರು ನೀಡಿದ್ದರು.
ದೂರಿನ ಅನ್ವಯ ಕಳೆದ ಒಂದೆರಡು ವಾರಗಳಿಂದ ಈತನ ಮೇಲೆ ನಿಗಾಯಿರಿಸಿದ್ದ ನೇವಿ ಇಂಟೆಲಿಜೆನ್ಸ ಹಾಗೂ ಕಾರವಾರ ಪೊಲೀಸರು ಗ್ರೌಂಡ್ ವರ್ಕ ಮಾಡಿದಾಗ ಈತನ ಅಸಲಿಯತ್ತು ಬಯಲಾಗಿದೆ. ನೇವಿ ಇಂಟೆಲಿಜೆನ್ಸ ಹಾಗೂ ಕಾರವಾರ ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ 66,000ರೂ. ನಗದು ವಶಕ್ಕೆ ಪಡೆದಿದ್ದಾರೆ. ಸದ್ಯ ಬಂಧನಕ್ಕೊಳಗಾದ ವಿನಾಯಕನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಇನ್ನು ಈ ಹಿಂದೆ ಆರೋಪಿ ಬೆಳಗಾವಿ ಕಮಾಂಡೋ ಟ್ರೈನಿಂಗ್ ಸ್ಕೂಲನಲ್ಲಿ ಚಿಕ್ಕಪುಟ್ಟ ಕೆಲಸಕ್ಕೆ ಸೇರಿಕೊಂಡಿದ್ದ. ಮರಾಠಾ ಲೈಟ್ ಇನಫೆಂಟ್ರಿ ವಿಭಾಗದಡಿ ಹೆಲ್ಪಿಂಗ್ ಬಾಯ್ ಆಗಿ ಸ್ವೀಪಿಂಗ್ ಮುಂತಾದ ಕೆಲಸ ಮಾಡುತ್ತಿದ್ದ.
ಅದರಂತೆ ಅಧಿಕಾರಿಗಳ ರ್ಯಾಂಕಿಂಗ್, ಅವರ ಯೂನಿಫಾರ್ಮ ಬಗ್ಗೆ ಮಾಹಿತಿ ಕಲೆ ಹಾಕಿದ್ದನು. ಬಳಿಕ ಆ ಕೆಲಸವನ್ನು ಬಿಟ್ಟು 2015-16ರ ವೇಳೆ ಆರ್ಮಿ ಆಫೀಸರ ಯೂನಿಫಾರ್ಮ ಖರೀದಿಸಿ 2020ರಿಂದ ಅಧಿಕಾರಿಯ ಹೆಸರು ಹೇಳಿ ಓಡಾಡಿಕೊಂಡಿದ್ದ. ಕಾರವಾರ ಹಾಗೂ ಗೋವಾ ಭಾಗದಲ್ಲಿ ಹಲವರಿಗೆ ಈತ ಮೋಸ ಮಾಡಿರುವ ಶಂಕೆ ಇದೆ.