ಬೆಂಗಳೂರು – ಕನ್ನಡದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ ನಿಧನರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ವಯೋಸಹಜದಿಂದ ಬಳಲುತ್ತಿದ್ದ ಅವರು ಹೃದಯಘಾತದಿಂದ ಅವರು ವಿಧಿವಶರಾದರು ಎಂದು ವರದಿಯಾಗಿದೆ.
“ರಾತ್ರಿ ಹೊಟ್ಟೆ ನೋವು ಆಗ್ತಾ ಇದೆ ಹೇಳ್ತಿದ್ರು. ಅವರಿಗೆ ಲೂಸ್ ಮೋಷನ್ ಆಗಿತ್ತು. ರಾತ್ರಿ ಸರಿಯಾಗಿ ನಿದ್ದೆ ಮಾಡಿರಲಿಲ್ಲ. ಬೆಳಗ್ಗೆ ಕಾಫಿ ಕುಡಿದಿದ್ದರು. ಕಾಫಿ ಕುಡಿದು ಸ್ವಲ್ಪ ಎರಡು ಗಂಟೆ ನಿದ್ದೆ ಮಾಡ್ತಿನಿ ಅಂತ ನಿದ್ದೆ ಮಾಡಿದ್ದರು. ಬಳಿಕ ಎದ್ದೇಳಲಿಲ್ಲ ಬಳಿಕ ಹೃದಯಾಘಾತವಾಗಿತ್ತು ” ಎಂದು ದ್ವಾರಕೀಶ ಪುತ್ರ ಯೋಗೇಶ ಪತ್ರಕರ್ತರಿಗೆ ಮಾಹಿತಿ ನೀಡಿದ್ದಾರೆ.
1964ರಲ್ಲಿ ʼವೀರ ಸಂಕಲ್ಪʼ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ದ್ವಾರಕೀಶ ಅವರು, ನಟರಾಗಿ, ಹಾಸ್ಯ ಕಲಾವಿದರಾಗಿ, ಪೋಷಕ ನಟನಾಗಿ ನೂರಾರು ಸಿನಿಮಾಗಳಲ್ಲಿ ಮಿಂಚಿದ್ದರು. ದ್ವಾರಕೀಶ ಅವರು ಹೆಚ್ಚು ಜನಪ್ರಿಯರಾದದ್ದು ವಿಷ್ಣುವರ್ಧನ್ ಅವರೊಂದಿಗೆ ಒಂದು ಕಾಲದಲ್ಲಿ ವಿಷ್ಣುವರ್ಧನ್ ಹಾಗೂ ದ್ವಾರಕೀಶ ಜೋಡಿ ಕಳ್ಳ-ಕುಳ್ಳ ಎಂದೇ ಪ್ರಸಿದ್ಧವಾಗಿತ್ತು. ವಿಷ್ಣುವರ್ಧನ್ ಅವರ ಅನೇಕ ಸಿನಿಮಾದಲ್ಲಿ ಅವರು ತೆರೆ ಹಂಚಿಕೊಂಡಿದ್ದರು. ಇದರಲ್ಲಿ ʼಆಪ್ತಮಿತ್ರʼ ಸಿನಿಮಾದಲ್ಲಿನ ಇವರಿಬ್ಬರ ಅಭಿನಯ ಗಮನ ಸೆಳೆದಿತ್ತು.
1966ರಲ್ಲಿ ದ್ವಾರಕೀಶ ಅವರು ʼಮಮತೆಯ ಬಂಧನʼ ಸಿನಿಮಾವನ್ನು ಜಂಟಿಯಾಗಿ ನಿರ್ಮಾಣ ಮಾಡಿದ್ದರು. ಡಾ.ರಾಜಕುಮಾರ ಅಭಿನಯದ ಮೇಯರ್ ಮುತ್ತಣ್ಣ ಎಂಬ ಸಿನಿಮಾ ನಿರ್ಮಿಸುವ ಮೂಲಕ ಸ್ವತಂತ್ರ ನಿರ್ಮಾಪಕರಾಗಿ ಕಾಲಿಟ್ಟರು. ‘ದ್ವಾರಕೀಶ ಚಿತ್ರ’ ಬ್ಯಾನರ್ ಅಡಿಯಲ್ಲಿ ‘ಭಾಗ್ಯವಂತರು’, ʼಮೇಯರ್ ಮುತ್ತಣ್ಣʼ, ʼಕುಳ್ಳ ಎಜೆಂಟ್ ೦೦೦ʼ, ʼಕೌಬಾಯ್ ಕುಳ್ಳʼ, ʼಸಿಂಗಪೂರಿನಲ್ಲಿ ರಾಜಾ ಕುಳ್ಳʼ, ʼಪ್ರೀತಿ ಮಾಡು ತಮಾಷೆ ನೋಡುʼ ಹೀಗೆ ಸುಮಾರು 40 ಕ್ಕೂ ಹೆಚ್ಚಿನ ಸಿನಿಮಾಗಳನ್ನು ದ್ವಾರಕೀಶ ನಿರ್ಮಿಸಿದ್ದರು.
1985ರಲ್ಲಿ ʼಬಾರಿ ನೀ ಬರೆದ ಕಾದಂಬರಿʼ ಎಂಬ ಚಿತ್ರವನ್ನು ನಿರ್ದೇಶಿಸುವ ಮೂಲಕ ನಿರ್ದೇಶನ ಕ್ಷೇತ್ರಕ್ಕೆ ಕಾಲಿಟ್ಟರು. ಆ ಬಳಿಕ ನಂತರʼ ಡಾನ್ಸ ರಾಜ ಡಾನ್ಸʼ, ʼಶ್ರುತಿ ಹಾಕಿದ ಹೆಜ್ಜೆʼ, ʼರಾಯರು ಬಂದರು ಮಾವನ ಮನೆಗೆʼ, ‘ಮಜ್ನು’, ‘ಗಿಡ್ಡು ದಾದ’, ʼಕಿಡ್ನಾಪ್ʼ, ʼಕಿಲಾಡಿಗಳುʼ ಸೇರಿದಂತೆ ಅನೇಕ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದರು.
‘ಜನ್ಮರಹಸ್ಯ’, ‘ಮಂಕುತಿಮ್ಮ’, ‘ಪೆದ್ದ ಗೆದ್ದ’, ‘ಕಿಟ್ಟು ಪುಟ್ಟು’, ‘ಸಿಂಗಾಪುರದಲ್ಲಿ ರಾಜಾ-ಕುಳ್ಳ’, ‘ಆಪ್ತಮಿತ್ರ’, ‘ಪ್ರಚಂಡ ಕುಳ್ಳ’, ‘ಗುರು-ಶಿಷ್ಯರು’, ‘ಆಟಗಾರ’, ‘ವಿಷ್ಣುವರ್ಧನ್’ ಹೀಗೆ ನೂರಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಕೊನೆಯದಾಗಿ ಅವರು ʼಚೌಕʼ ಸಿನಿಮಾದಲ್ಲಿ ನಟಿಸಿದ್ದರು.