ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ : ಫಯಾಜ ತಾಯಿಯ ಆಗ್ರಹ

A B Dharwadkar
ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ : ಫಯಾಜ ತಾಯಿಯ ಆಗ್ರಹ

ಧಾರವಾಡ, ಎ. 20:  ನೇಹಾ ಹಿರೇಮಠ ಹತ್ಯೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಹಂತಕ ಫಯಾಜನ ತಾಯಿ ಮುಮ್ತಾಜ ಹೇಳಿದ್ದಾರೆ.

ಮೊದಲು ಅವನು ಬಹಳ ಓದಿನಲ್ಲಿ ಜಾಣನಿದ್ದ. ಅವಳೇ ಇವನಿಗೆ ಪ್ರಪೋಸ್ ಮಾಡಿದ್ದಳು.  ನನ್ನ ಬಳಿ ಅವನು ಹೇಳಿದಾಗ ನೇಹಾ  ಮತ್ತು ಫಯಾಜ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಆದರೆ, ನೇಹಾಳನ್ನು ಹತ್ಯೆ ಮಾಡುವ ಮೂಲಕ ನನ್ನ ಮಗ ದೊಡ್ಡ ತಪ್ಪು ಮಾಡಿದ್ದಾನೆ. ಆತನಿಗೆ ಈ ನೆಲದ ಕಾನೂನಿನಡಿ ಕಠಿಣ ಶಿಕ್ಷೆಯಾಗಲಿ ಎಂದು ಹಂತಕ ಫಯಾಜನ ತಾಯಿ ಮುಮ್ತಾಜ ಆಗ್ರಹಿಸಿದ್ದಾರೆ.

ನನ್ನ ಮಗ ಮಾಡಿದ ತಪ್ಪಿಗೆ ನಾನು ರಾಜ್ಯದ ಜನತೆಗೆ ಕ್ಷಮೆಯಾಚಿಸುತ್ತೇನೆ. ನೇಹಾ ಕೂಡ ನನ್ನ ಮಗಳು ಇದ್ದಂತೆ. ಅವರ ತಂದೆ– ತಾಯಿಗೆ ಎಷ್ಟು ದುಃಖ ಆಗಿದಿಯೋ ಅಷ್ಟೇ ದುಃಖ ನಮಗೂ ಆಗಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಅವರು ಹೇಳಿದ್ದಾರೆ.

ಫಯಾಜ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಗೆಲುವು ಸಾಧಿಸುವ ಮೂಲಕ ಯುನಿವರ್ಸಿಟಿ ಬ್ಲೂ ಆಗಿದ್ದ. ಅದಾದ ಬಳಿಕ ನೇಹಾಳೇ ಖುದ್ದಾಗಿ ಫಯಾಜ ಬಳಿ ಮೊಬೈಲ್ ನಂಬರ್ ತೆಗೆದುಕೊಂಡಿದ್ದಳು. ಮೊದಲಿಗೆ ಆಕೆಯೇ ನನ್ನ ಮಗನಿಗೆ ಪ್ರಪೋಸ್‌ ಮಾಡಿದ್ದಳು. ಒಂದು ವರ್ಷದ ಹಿಂದೆ ನಾವಿಬ್ಬರೂ ಪ್ರೀತಿ ಮಾಡುತ್ತಿದ್ದೇವೆ ಎಂದು ಫಯಾಜ ನನ್ನ ಬಳಿ ಹೇಳಿಕೊಂಡಾಗ ಲವ್ ಬೇಡ ಅಂತ ಹೇಳಿದ್ದೆ ಎಂದು ಮುಮ್ತಾಜ ಹೇಳಿದ್ದಾರೆ.

ಎಸ್‌ಎಸ್ಎಲ್‌ಸಿ ಮತ್ತು ಪಿಯುಸಿಯಲ್ಲಿ ಚೆನ್ನಾಗಿ ಓದುತ್ತಿದ್ದ ಫಯಾಜನು ಶೇ 90ರಷ್ಟು ಅಂಕಗಳನ್ನು ಪಡೆದಿದ್ದ. ಹಾಗಾಗಿ ಆತನನ್ನು ಐಎಎಸ್‌ ಮಾಡಿಸಬೇಕು ಎಂದು ಕನಸು ಕಂಡಿದ್ದೆ. ಆದರೆ, ಪ್ರೀತಿಯಲ್ಲಿ ಬಿದ್ದ ಬಳಿಕ ಆತ ಓದಿನಲ್ಲಿ ಹಿಂದುಳಿದಿದ್ದ ಎಂದು ಮುಮ್ತಾಜ ಕಣ್ಣೀರು ಹಾಕಿದರು. ಈ ಕೃತ್ಯ ಮಾಡಿದ ಅವನಿಗೆ ತಕ್ಕ ಶಿಕ್ಷೆಯಾಗಬೇಕು. ಈ ರೀತಿಯಾಗಿದ್ದು ನೋಡಿ ಬಹಳ ಸಂಕಟ ಆಗುತ್ತಿದೆ ಎಂದು ಆಕೆ ದುಃಖ ತೋಡಿಕೊಂಡಿದ್ದಾರೆ.

ನೇಹಾ ಹಿರೇಮಠಳನ್ನು ಕೊಂದ ನನ್ನ ಮಗನಿಗೆ ಅತ್ಯಂತ ಕಠಿನ ಶಿಕ್ಷೆ ಆಗಲಿ. ಆ ಶಿಕ್ಷೆಯನ್ನು ನೋಡಿ ಮುಂದೆ ಯಾರೂ ಇಂಥ ಕ್ರೂರ ಕೆಲಸಕ್ಕೆ ಕೈ ಹಾಕಬಾರದು ಎಂದು ಕೊಲೆ ಪ್ರಕರಣದ ಆರೋಪಿ ಫಯಾಜ‌ನ ತಂದೆ, ಶಿಕ್ಷಕ ಬಾವಾಸಾಹೇಬ (ಭವಾನಿ) ಕೊಂಡುನಾಯ್ಕ ಹೇಳಿದ್ದಾರೆ.

ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ್ದ ಅವರು, ಕಾನೂನು ಅವನಿಗೆ ಯಾವ ಶಿಕ್ಷೆ ಕೊಟ್ಟರೂ ಸ್ವಾಗತಿಸುತ್ತೇನೆ. ನೇಹಾ ಕುಟುಂಬದವರು, ರಾಜ್ಯದ ಜನ ಹಾಗೂ ಮುನವಳ್ಳಿ ಜನತೆ ದಯವಿಟ್ಟು ನನ್ನನ್ನು ಕ್ಷಮಿಸಬೇಕು ಎಂದು ಮನವಿ ಅವರು ಮಾಡಿದರು.

ನಾವೆಲ್ಲರೂ ಹೆಣ್ಣು ಮಕ್ಕಳು ಎಂದರೆ ಪೂಜಿಸುತ್ತೇವೆ. ಹೆಣ್ಣು ಮಕ್ಕಳು ಎಂದರೆ ದೇವರೆಂದು ಭಾವಿಸುವ ದೇಶ ನಮ್ಮದು. ಯಾರಿಗಾದರೂ ಅನ್ಯಾಯ ಆದಲ್ಲಿ ಪ್ರತಿಭಟನೆ ಮಾಡುತ್ತಿರುವವರ ಹೋರಾಟಕ್ಕೆ ಜಯವಾಗಲಿ. ಕರ್ನಾಟಕ ಜನತೆಯಲ್ಲಿ ನಾನು ಕ್ಷಮೆ ಯಾಚಿಸುತ್ತೇನೆ. ಈ ಘಟನೆಯಿಂದ ಮುನವಳ್ಳಿ ಊರಿಗೆ ಕಪ್ಪು ಚುಕ್ಕೆ ಬಂದಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯದ ಜನತೆ ಹಾಗೂ ಮುನವಳ್ಳಿ ಯುವಕರು ಶಾಂತಿ ಕಾಪಾಡಬೇಕು. ಯಾವ ಹೆಣ್ಣು ಮಕ್ಕಳ ಮೇಲೆ ಯಾರೂ ಕಣ್ಣು ಹಾಕಬಾರದು. ನೇಹಾ ನನ್ನ ಮಗಳಿದ್ದ ಹಾಗೆ, ಅವರ ಮಗಳಿಗೆ ಆದ ಕೃತ್ಯ ನಮ್ಮ ಮಗಳ ಮೇಲೆಯೂ ಆಗಬಹುದು. ಪ್ರತಿಭಟನೆ ಮಾಡುವವರಿಗೆ ದೊಡ್ಡ ಸಲಾಮ್ ಎಂದರು.

ನೇಹಾ ಹಾಗೂ ಫಯಾಜ್‌ ರೀಲ್ಸ‌ ವೈರಲ್‌ ಆಗಿರುವ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, ಅವರಿಬ್ಬರ ಮಧ್ಯೆ ಪ್ರೀತಿ ಇತ್ತು. ಈ ನಿಮ್ಮ ಪ್ರೀತಿಗೆ “ಲವ್‌ ಜಿಹಾದ್‌’ ಬಣ್ಣ ಕಟ್ಟಿ ಟಾರ್ಗೆಟ್‌ ಮಾಡುತ್ತಾರೆ ಎಂದು ಮಗನಿಗೆ ಬುದ್ಧಿ ಹೇಳಿದ್ದೆ ಎಂದೂ ಅವರು ಹೇಳಿದ್ದಾರೆ.

ಹುಬ್ಬಳ್ಳಿ ನಗರದ ಬಿವಿಬಿ ಕಾಲೇಜು ಆವರಣದಲ್ಲಿ ಗುರುವಾರ ನೇಹಾಳಿಗೆ ಚಾಕುವಿನಿಂದ ಇರಿದು ಫಯಾಜ ಕೊಲೆ ಮಾಡಿದ್ದ. ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.