ಬೆಳಗಾವಿ : ಶಹಾಪುರದ ಮರಾಠಾ ವಿದ್ಯಾಮಂದಿರ ಶಾಲೆಯ ಮೈದಾನದಲ್ಲಿ ಗುರುವಾರ ಸಂಜೆ ಎರಡು ಅಪ್ರಾಪ್ತ ವಯಸ್ಸಿನ ತಂಡ ಕ್ರಿಕೆಟ್ ಮ್ಯಾಚ್ ಆಡಿದೆ. ತುರುಸಿನಿಂದ ನಡೆದ ಪಂದ್ಯದಲ್ಲಿ ಗೆದ್ದ ತಂಡ ಸಂಭ್ರಮಾಚರಣೆಯಲ್ಲಿ ತೊಡಗಿದ್ದರೆ, ಸೋತ ತಂಡ ಅವರ ಮೇಲೆ ಹಲ್ಲೆ ಮಾಡಿದೆ. ಆಗ ಅಲ್ಲಿಯೇ ಇದ್ದ ಹಿರಿಯರೂ ಹೊಡೆದಾಟದಲ್ಲಿ ಭಾಗಿಯಾಗಿದ್ದರು.
ಅಷ್ಟಕ್ಕೇ ಮುಗಿದಿದ್ದ ಹೊಡೆದಾಟ ಸಂಜೆ ಸುಮಾರು
6.30 ಗಂಟೆಗೆ ತಾವು ವಾಸವಾಗಿರುವ ಅಳವಣ ಗಲ್ಲಿಯಲ್ಲೂ ಮುಂದುವರೆದು ಕೋಮು ಸಂಘರ್ಷಕ್ಕೆ ಕಾರಣವಾಗಿದೆ. ಒಂದು ಕೋಮಿನ ಯುವಕರು ಇನ್ನೊಂದು ಕೋಮಿನವರ ಮನೆಗಳಿಗೆ ಕಲ್ಲೆಸೆದಿದ್ದಾರೆ. ಎರಡೂ ಗುಂಪಿನವರು ತಲವಾರ್ ಮುಂತಾದ ಮಾರಕಾಸ್ತ್ರಗಳನ್ನು ಪ್ರದರ್ಶಿಸಿದ್ದು ಆಗ ಸ್ಥಳಕ್ಕೆ ಓರ್ವ ಮಹಿಳಾ ಪೊಲೀಸ್ ಅಧಿಕಾರಿ ಮತ್ತು ಓರ್ವ ಪೇದೆ ಆಗಮಿಸಿದ್ದಾರೆ. ಅದನ್ನು ಕಂಡು ಎಲ್ಲರೂ ಪಲಾಯನಗೈದಿದ್ದಾರೆ. ಆಗ ಓರ್ವ ತನ್ನ ತಲವಾರ್ ರಸ್ತೆಗೆ ಎಸೆದಿದ್ದಾನೆ.
ಕಲ್ಲು ತೂರಾಟದಲ್ಲಿ ನಿರತರಾಗಿದ್ದವರ ಮತ್ತು ತಲವಾರ್ ಪ್ರದರ್ಶಿಸಿದ್ದವರ ವಿರುದ್ಧ ಶಹಾಪುರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಸೇರಿದಂತೆ ಐಪಿಸಿ ಸೆಕ್ಷನ್ 143, 147,148, 323, 324, 354, 504, 506, 153a ಮತ್ತು 149-ರಡಿ ಪ್ರಕರಣ ದಾಖಲಿಸಲಾಗಿದೆ.