ಸಕಲ ಸರಕಾರಿ ಗೌರವದೊಂದಿಗೆ ಸಚಿವ ಉಮೇಶ ಕತ್ತಿ ಅವರಿಗೆ ಅಂತಿಮ ವಿದಾಯ

A B Dharwadkar
ಸಕಲ ಸರಕಾರಿ ಗೌರವದೊಂದಿಗೆ ಸಚಿವ ಉಮೇಶ ಕತ್ತಿ ಅವರಿಗೆ ಅಂತಿಮ ವಿದಾಯ
Latest news isolated icon, megaphone or bullhorn, breaking report vector. Info announcement and TV or radio broadcast, web article, loudspeaker. Daily headline emblem or logo, message or advertising

ಬೆಳಗಾವಿ, ಸೆ.7-: ತೀವ್ರ ಹೃದಯಾಘಾತದಿಂದ ಮಂಗಳವಾರ ರಾತ್ರಿ ನಿಧನ ಹೊಂದಿದ ಅರಣ್ಯ, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಸಚಿವ ಉಮೇಶ ಕತ್ತಿ(61) ಅವರ ಅಂತ್ಯಕ್ರಿಯೆ ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿತು.

ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಮಧ್ಯಾಹ್ನ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಜೆ ಆಗಮಿಸಿದ ಪಾರ್ಥೀವ ಶರೀರವನ್ನು ಪುಷ್ಪಾಲಂಕೃತ ವಾಹನದಲ್ಲಿ ಮೆರವಣಿಗೆ ಮೂಲಕ ಅವರ ಹುಟ್ಟೂರಾದ ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿಗೆ ಕೊಂಡೊಯ್ಯಲಾಯಿತು. ಸಾರ್ವಜನಿಕ ದರ್ಶನದ ಬಳಿಕ ಅವರ ತೋಟದಲ್ಲಿ ಬುಧವಾರ(ಸೆ.7) ಸಂಜೆ ವೀರಶೈವ ಲಿಂಗಾಯತ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ ನಡೆಸಲಾಯಿತು. ತೋಟದಲ್ಲಿರುವ ಅವರ ತಂದೆ ವಿಶ್ವನಾಥ ಕತ್ತಿ ಹಾಗೂ ತಾಯಿ ರಾಜೇಶ್ವರಿ ಕತ್ತಿ ಅವರ ಸಮಾಧಿ ಸ್ಥಳದ ಪಕ್ಕದಲ್ಲಿಯೇ ಸಚಿವ ಉಮೇಶ ಕತ್ತಿ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಇದಕ್ಕೂ‌ ಮುಂಚೆ ಬೆಲ್ಲದ ಬಾಗೇವಾಡಿ ಬಳಿಯ ವಿಶ್ವರಾಜ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಪಾರ್ಥೀವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರಕಾರಿ ಗೌರವವನ್ನು ಸಮರ್ಪಿಸಿ ಉಮೇಶ ಕತ್ತಿ ಅವರ ಪತ್ನಿ ಶೀಲಾ ಅವರಿಗೆ ರಾಷ್ಟ್ರಧ್ವಜವನ್ನು ಹಸ್ತಾಂತರಿಸಿದರು. ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಸರಕಾರಿ ಗೌರವವನ್ನು ಸಲ್ಲಿಸಲಾಯಿತು.

ತದನಂತರ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಕೃಷಿ ಇಲಾಖೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಕಂದಾಯ ಸಚಿವ ಆರ್.ಅಶೋಕ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಗೃಹ ಸಚಿವ ಅರಗ ಜ್ಞಾನೇಂದ್ರ, ಸಚಿವ ಸಿ.ಸಿ.ಪಾಟೀಲ, ಹಾಲಪ್ಪ ಆಚಾರ, ಶಂಕರ ಪಾಟೀಲ ಮುನೇನಕೊಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲ, ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಎಚ್.ಡಿ.ರೇವಣ್ಣ, ಬಿ.ಎಸ್.ವಿಜಯೇಂದ್ರ, ಸಂಸದರಾದ ಮಂಗಳ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ‌ರಾದ ರಮೇಶ ಜಾರಕಿಹೊಳಿ, ಸತೀಶ ಜಾರಕಿಹೊಳಿ, ಮಹಾಂತೇಶ ಕೌಜಲಗಿ, ಪಿ.ರಾಜೀವ, ಲಕ್ಷ್ಮೀ ಹೆಬ್ಬಾಳಕರ, ಅನಿಲ ಬೆನಕೆ, ಅಂಜಲಿ ನಿಂಬಾಳಕರ, ಅಭಯ ಪಾಟೀಲ,, ಎಂ.ಬಿ.ಪಾಟೀಲ, ಬಸನಗೌಡ ಪಾಟೀಲ ಯತ್ನಾಳ, ವಿಧಾನಪರಿಷತ್ ಸದಸ್ಯರಾದ ಲಕ್ಷ್ಮಣ ಸವದಿ, ಪ್ರಕಾಶ ಹುಕ್ಕೇರಿ, ಚನ್ನರಾಜ ಹಟ್ಟಿಹೊಳಿ, ಡಾ.ಪ್ರಭಾಕರ ಕೋರೆ ಸೇರಿದಂತೆ ಜಿಲ್ಲೆಯ ಅನೇಕ ಜನಪ್ರತಿನಿಧಿಗಳು ವಿವಿಧ ಗಣ್ಯರು ಅಂತಿಮದರ್ಶನ ಪಡೆದುಕೊಂಡರು.

ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ನಿಡಸೋಸಿ ಮಠದ ಶಿವಲಿಂಗೇಶ್ವರ ಶ್ರೀಗಳು, ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಜಯಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ನಾಡಿನ ವಿವಿಧ ಮಠಾಧೀಶರು ಉಪಸ್ಥಿತರಿದ್ದರು.

ಸಂಜೆ 6 ಗಂಟೆಗೆ ಆಗಮಿಸಿದ ಪಾರ್ಥೀವ ಶರೀರಕ್ಕೆ ಸರಕಾರಿ ಗೌರವ ಸಮರ್ಪಿಸಲಾಯಿತು. ತದನಂತರ ಹುಕ್ಕೇರಿ ಹಿರೇಮಠದ ಚಂದ್ರಶೇಖರ್ ಸ್ವಾಮೀಜಿ ಸೇರಿದಂತೆ ವಿವಿಧ ಮಠದ ಸ್ವಾಮೀಜಿಯವರು ಅಂತಿಮ ವಿಧಿವಿಧಾನ‌ವನ್ನು ನಡೆಸಿಕೊಟ್ಟರು.

ಇದಾದ ಬಳಿಕ ವಿಶ್ವರಾಜ್ ಸಕ್ಕರೆ ಕಾರ್ಖಾನೆ ಆವರಣದಿಂದ ಅಂತಿಮಯಾತ್ರೆ ಆರಂಭಗೊಂಡ ಅಂತಿಮಯಾತ್ರೆಯು ಬೆಲ್ಲದ ಬಾಗೇವಾಡಿ ಗ್ರಾಮದ ಮೂಲಕ ರಾತ್ರಿ 9.30 ಗಂಟೆಗೆ ತೋಟವನ್ನು ತಲುಪಿತು. ಧಾರ್ಮಿಕ ವಿಧಿವಿಧಾನದ ಬಳಿಕ ಅಂತ್ಯಕ್ರಿಯೆ ಮಾಡಲಾಯಿತು.
ಪಕ್ಷದ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಸೇರಿದಂತೆ ಸಾವಿರಾರು ಜನರು ಅಗಲಿದ ಮುಖಂಡನ ಅಂತಿಮ ದರ್ಶನ ಪಡೆದುಕೊಂಡು ಅಶ್ರುತರ್ಪಣೆ ಸಲ್ಲಿಸಿದರು.

ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.

1961 ಮಾರ್ಚ್ 14 ರಂದು ಜನಿಸಿದ ಸಚಿವ ಕತ್ತಿ ಅವರು, ತಮ್ಮ ತಂದೆ ವಿಶ್ವನಾಥ ಕತ್ತಿ ಅವರ ಅಕಾಲಿಕ ನಿಧನದ ಬಳಿಕ 25 ನೇ ವಯಸ್ಸಿನಲ್ಲಿಯೇ ವಿಧಾನಸಭೆ ಪ್ರವೇಶಿಸಿ ನಂತರ ಎಂಟು ಬಾರಿ ಶಾಸಕರಾಗಿ ಆಯ್ಕೆಗೊಂಡಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.