ಬೆಳಗಾವಿ : ಬೆಳಗಾವಿಯ ಹಿಂಡಲಗಾ ಜೈಲ್ ನಿಂದ
ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡಕರಿ ಅವರಿಗೆ ಕರೆ ಮಾಡಿ 100 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟು ಅವರಿಗೆ ಕೊಲೆ ಬೆದರಿಕೆ ಹಾಕಿದ್ದಲ್ಲದೇ ತಾನು ತಲೆ ದಾವೂದ ಇಬ್ರಾಹಿಂ ಗ್ಯಾಂಗ್ ಗೆ ಸೇರಿದವನು ಎಂದು ಹೇಳಿಕೊಂಡಿದ್ದ ಜಯೇಶ ಪೂಜಾರಿ ವಿರುದ್ಧ ರಾಷ್ಟೀಯ ತನಿಖಾ ದಳ (ಎನ್ ಐ ಎ) ಪ್ರಕರಣ ದಾಖಲಿಸಿಕೊಂಡು, ಎನ್ ಐ ಎ ವಿಶೇಷ ನ್ಯಾಯಾಲಯಕ್ಕೂ ಮಾಹಿತಿ ನೀಡಿದೆ.
ಮಂಗಳೂರಿನಲ್ಲಿ 2020ರಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಬೆಳಗಾವಿಯ ಹಿಂಡಲಗಾ ಸೆರೆಮನೆಯಲ್ಲಿದ್ದ ಪೂಜಾರಿ ಕಳೆದ ಜನೆವರಿ 14ರಂದು ಮಹಾರಾಷ್ಟ್ರದ ನಾಗಪುರದ ಖಾಮ್ಲ ಎಂಬಲ್ಲಿರುವ ಗಡಕರಿ ಅವರ ಸಾರ್ವಜನಿಕ ಸಂಪರ್ಕ ಕಚೇರಿಗೆ ಫೋನ್ ಮಾಡಿ ತಾನು
ದಾವೂದ ಇಬ್ರಾಹಿಂ ಗುಂಪಿನ ಸದಸ್ಯನೆಂದು ಹೇಳಿ, ಬೆಂಗಳೂರಿನಲ್ಲಿರುವ ಒಬ್ಬರ ಹೆಸರು ಹೇಳಿ ಅವರಿಗೆ 100 ಕೋಟಿ ರೂಪಾಯಿ ಕೊಡಬೇಕು ಇಲ್ಲದಿದ್ದರೆ ಸಚಿವರನ್ನು ಹತ್ಯೆ ಮಾಡಲಾಗುವದು ಎಂದು ತಿಳಿಸಿದ್ದ. ಅಲ್ಲದೇ ತಾನು ಕರ್ನಾಟಕದ ಬೆಳಗಾವಿಯಿಂದ ಮಾತನಾಡಿದ್ದಾಗಿಯೂ ತಿಳಿಸಿದ್ದ.
ಜೈಲಿಗೆ ಅದೇ ದಿನ ಸೇರಿಸಲ್ಪಟ್ಟಿದ್ದ ವಿಚಾರಣಾಧೀನ ಕೈದಿಯೊಬ್ಬರ ಮೊಬೈಲ್ ಪಡೆದು ಅದರಿಂದ ಗಡಕರಿ ಅವರ ಕಚೇರಿಯ ಸ್ಥಿರ ದೂರವಾಣಿಗೆ ಪೂಜಾರಿ ಜನೆವರಿ 14ರಂದು ಮುಂಜಾನೆ 11.25, 11.32 ಮತ್ತು ಮಧ್ಯಾಹ್ನ 12.20ಕ್ಕೆ ಫೋನ್ ಮಾಡಿದ್ದ. ಮಾಹಿತಿ ಪಡೆದ ತಕ್ಷಣ ಬೆಳಗಾವಿಗೆ ಆಗಮಿಸಿದ ನಾಗಪುರ ಪೋಲಿಸರು ಬೆಳಗಾವಿ ಪೋಲೀಸರ ನೆರವಿನಿಂದ ಕಾಲ್ ಮಾಡಲು ಬಳಸಿದ ಮೊಬೈಲ್ ಫೋನ್ ಲೊಕೇಶನ್ ಪತ್ತೆ ಮಾಡಿ ಬೆಳಗಾವಿ ಜೈಲಿಗೆ ತೆರಳಿ ಪೂಜಾರಿಯ ವಿಚಾರಣೆ ಮಾಡಿ ತೆರಳಿದ್ದರು.
ಪೂಜಾರಿ ಮತ್ತೇ ಮಾರ್ಚ 21ಕ್ಕೆ ಗಡಕರಿ ಕಚೇರಿಗೆ ಫೋನ್ ಮಾಡಿ ಮೊದಲಿನ ಬೇಡಿಕೆ ಪುನಃ ಇಟ್ಟಿದ್ದ. ಮೊದಲಿನಂತೆ 100 ಕೋಟಿ ರೂಪಾಯಿ ಕೇಳದೇ 10 ಕೋಟಿ ರೂಪಾಯಿ ಕೊಡುವಂತೆ ಹೇಳಿ ತಪ್ಪಿದರೆ ಕಚೇರಿಯನ್ನು ಸ್ಫೋಟ ಮಾಡುವದಾಗಿ ಬೆದರಿಕೆ ಹಾಕಿದ್ದ.
ತಾನು ದಾವೂದ ಇಬ್ರಾಹಿಂ ಗ್ಯಾಂಗ್ ಗೆ ಸೇರಿದವನು ಎಂದು ಹೇಳಿದ್ದಕ್ಕೆ ನಾಗಪುರ ಪೊಲೀಸರು ವಿಷಯವನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಗಮನಕ್ಕೆ ತಂದು ಪೂಜಾರಿಯನ್ನು ಅವರ ವಶಕ್ಕೆ ಒಪ್ಪಿಸಿದರು. ವಿಚಾರಣೆಯಲ್ಲಿ ತನ್ನ ಗ್ಯಾಂಗ್ ನ ಇತರ ಮೂರು ಸದಸ್ಯರು ಬೆಂಗಳೂರಿನಲ್ಲಿದ್ದಾರೆ ಎಂದು ಮಾಹಿತಿ ನೀಡಿದ್ದರಿಂದ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳವು ಈ ಪ್ರಕರಣವನ್ನು ಎನ್ ಐಎಗೆ ನೀಡಿ ಪೂಜಾರಿಯನ್ನು ಅವರ ವಶಕ್ಕೆ ಒಪ್ಪಿಸಿದರು.
ಪೂಜಾರಿಯಿಂದ ಸಂಪೂರ್ಣ ಮಾಹಿತಿ ಪಡೆದುಕೊಂಡ ಎನ್ ಐಎಗೆ ಅವನ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡು ಈ ವಿಷಯವನ್ನು ಕಳೆದ ಬುಧವಾರ ಎನ್ ಐಎಗೆ ವಿಶೇಷ ನ್ಯಾಯಾಲಯದ ಗಮನಕ್ಕೆ ತಂದಿದೆ.
ಜೈಲಿನಲ್ಲಿ ಫೋನ್ ಬಳಕೆ ನಿಷೇಧವಿದ್ದರೂ ಜೈಲಿನಿಂದಲೇ ಕರೆ ಮಾಡಿರುವ ಕುರಿತು ಸಮದರ್ಶಿಗೆ ಸ್ಪಷ್ಟೀಕರಣ ನೀಡಿದ ಜೈಲ್ ಆಡಳಿತಾಧಿಕಾರಿ ಕೃಷ್ಣಕುಮಾರ ಅವರು, ಜೈಲಿಗೆ ಅದೇ ದಿನ ಬಂದಿದ್ದ ವಿಚಾರಣಾಧೀನ ಕೈದಿಯಿಂದ ಫೋನ್ ಪಡೆದು ಪೂಜಾರಿಯು ಸಚಿವ ಗಡಕರಿ ಕಚೇರಿಗೆ ಕರೆ ಮಾಡಿದ್ದಾನೆ. ತನ್ನ ಹೆಂಡತಿಯೊಂದಿಗೆ ಮಾತನಾಡುವುದಿದೆ ಎಂದು ಸುಳ್ಳು ಹೇಳಿ ಮೊಬೈಲ್ ಪಡೆದು ಆತ ಈ ಕೃತ್ಯವೆಸಗಿದ್ದಾನೆ.
ಕೈದಿಗಳು ಮಾತ್ರವಲ್ಲ ಸಿಬ್ಬಂದಿ ಸಹ ಜೈಲ್ ಆವರಣದೊಳಗೆ ಫೋನ್ ಬಳಸುವ ಹಾಗಿಲ್ಲ. ಹೊಸದಾಗಿ ಬಂದ ಕೈದಿಗಳು ಫೋನ್ ಮುಂತಾದವನ್ನು ತಮ್ಮ ದಾಖಲಾತಿ ಮಾಡುವ ಸಂದರ್ಭದಲ್ಲಿ ನೀಡಬೇಕಾಗುತ್ತದೆ. ಆದರೆ ಅದು ಹೇಗೆ ಪೂಜಾರಿ ಇಬ್ಬರಿಂದ ಫೋನ್ ಪಡೆದನೆಂಬ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಪೂಜಾರಿ ಹಿನ್ನಲೆ ಕುರಿತು ಮಾಹಿತಿ ನೀಡಿದ ಕೃಷ್ಣಕುಮಾರ, ಅವನೊಬ್ಬ ಸುಳ್ಳ, ವಂಚಕ, ಬ್ಲ್ಯಾಕ್ ಮೇಲರ್. ಜೈಲು ಸಿಬ್ಬಂದಿಗೆ ಕೆಟ್ಟ ಹೆಸರು ತರಲು ಮತ್ತು ತನ್ನ ವಿಷಯ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಬೇಕು ಎಂಬ ಉದ್ದೇಶದಿಂದ ಇಂತಹ ಕೃತ್ಯ ಮಾಡುತ್ತಾನೆ. ಇತ್ತೀಚಿಗೆ ಎಡಿಜಿಪಿ ಅಲೋಕ ಕುಮಾರ ಅವರಿಗೂ ಫೋನ್ ಮಾಡಿ ಬೆದರಿಕೆ ಹಾಕಿದ್ದ ಎಂದು ಅವರು ತಿಳಿಸಿದರು.
ಈಗ ಜೈಲಿನಲ್ಲಿ ಸೆಲ್ ಫೋನ್ ಬಳಕೆ ಸಂಪೂರ್ಣ ನಿಷೇಧವಾಗಿದೆ ಎಂದೂ ತಿಳಿಸಿದರು.