ಅಥಣಿ : ಅಥಣಿಯ 110 ಕೆ.ವಿ ವಿದ್ಯುತ್ ಕೇಂದ್ರದಲ್ಲಿ ಬೃಹತ್ ವಿದ್ಯುತ್ ಅವಘಡ ಸಂಭವಿಸಿ, ಬೆಂಕಿ ತನ್ನ ಕೆನ್ನಾಲಿಗೆ ಚಾಚಿ ಇಡೀ ವಿದ್ಯುತ್ ಕೇಂದ್ರವನ್ನೇ ವ್ಯಾಪಿಸುವಷ್ಟು ಜ್ವಾಲೆ ಹರಡಿ ಸಾರ್ವಜನಿಕರಲ್ಲಿ ಭಯ ಮೂಡಿಸಿತ್ತು.
ಅಥಣಿ ಪಟ್ಟಣದ ವಿಜಯಪುರ ರಸ್ತೆಗೆ ಹೊಂದಿಕೊಂಡ ವಿದ್ಯುತ್ ಕೇಂದ್ರದಲ್ಲಿ ಬೆಳಿಗ್ಗೆ ಸುಮಾರು 09:15 ಕ್ಕೆ ಬೆಂಕಿ ಹತ್ತಿದ್ದು , ಆಯಿಲ್ ಸೋರಿಕೆಯಿಂದ ಬೆಂಕಿ ಹತ್ತಿ ಉರಿದಿರಬಹುದು ಎಂದು ಅಧಿಕಾರಿ ಶಂಕೆ ವ್ಯಕ್ತಪಡಿಸಿದ್ದಾರೆ .
ಬೆಂಕಿಯ ತೀವ್ರತೆ ಹೆಚ್ಚಾಗಿದ್ದರಿಂದ ಕೋಟ್ಯಾಂತರ ರೂ ಮೌಲ್ಯದ ಟ್ರಾನ್ಸಫಾರ್ಮರ್ ಆದಿ ವಸ್ತುಗಳು ಸುಟ್ಟುಕರಕಲಾಗಿವೆ. ಬೆಂಕಿ ಆರಿಸಲು ಅಗ್ನಿಶಾಮಕದಳ ಸಿಬ್ಬಂದಿಗಳು ಹರಸಾಹಸ ಪಟ್ಟರು.
ಅಕ್ಕ ಪಕ್ಕ ಯಾವುದೇ ಮನೆ ಇಲ್ಲದ ಕಾರಣ ಯಾವುದೇ ಹಾನಿಯಾಗಿಲ್ಲ.
ಬೆಂಕಿ ಅವಘಡದಿಂದ ಸುಮಾರು ಎರಡು ಮೂರು ದಿನ ಹಲವೆಡೆ ವಿದ್ಯುತ್ ವ್ಯತ್ಯಯವಾಗುವ ಸಂಭವವಿದ್ದು ಮುಖ್ಯವಾಗಿ ಯಕ್ಕಚ್ಚಿ , ಅಥಣಿ ಗ್ರಾಮೀಣ , ಗುಂಡೆವಾಡಿ , ಮಸರಗುಪ್ಪಿ , ತಂಗಡಿ , ಕಟಗೇರಿ , ಬಸವನಗುಡಿ , ಬಡಚಿ, ಮಿನಿ ವಿಧಾನಸೌದಾ ಸೇರಿದಂತೆ ಹಲವೆಡೆ ವಿದ್ಯುತ್ ವ್ಯತ್ಯಯವಾಗುವುದು ಎಂದು ಅಧಿಕಾರಿಗಳು ತಿಳಿಸಿದರು.